

ಚಾಮರಾಜನಗರ: ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾ.12ರಂದು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಆಯೋಜನೆಗಾಗಿ ವಿವಿಧ ಸಮಿತಿಗಳನ್ನು ರಚಿಸಿ, ವಹಿಸಲಾಗಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿ ಸಮ್ಮುಖದಲ್ಲಿ ನಗರದಲ್ಲಿ ನಡೆಯಲಿರುವ ಸರ್ಕಾರದ 5 ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಸಂಬಂಧ ರಚಿಸಲಾಗಿರುವ ವಿವಿಧ ಸಮಿತಿ ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಸಭೆ ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಯಶಸ್ವಿಗೊಳಿಸಲು ಸ್ವಾಗತ ಸಮಿತಿ, ವೇದಿಕೆ, ಆಹಾರ, ವೈದ್ಯಕೀಯ, ಆರೋಗ್ಯ, ಸ್ವಚ್ಛತೆ, ಭದ್ರತೆ, ಶಿಷ್ಟಾಚಾರ, ವಾಹನಗಳ ಸಮಿತಿ, ಹೆಲಿಪ್ಯಾಡ್ ನಿರ್ಮಾಣ, ಪ್ರಚಾರ, ಮಾಹಿತಿ ಸಮಿತಿ ಸೇರಿದಂತೆ ವಿವಿಧ ಸಮಿತಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಣೆ ಮಾಡಬೇಕು. ಕರ್ತವ್ಯದಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸಮಾವೇಶದ ನಿರ್ವಹಣೆ ಸಂಬಂಧ ವಿವಿಧ ಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆತಂದು ಮತ್ತೆ ವಾಪಸ್ ಕರೆದುಕೊಂಡು ಹೋಗುವ ಕಾರ್ಯವನ್ನು ಸಮರ್ಪಕವಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಭಾಯಿಸಬೇಕು. ಸಮಾವೇಶದಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಬಸ್‌ಗಳ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳನ್ನು ನಿಯೋಜಿಸಬೇಕು ಎಂದು ತಿಳಿಸಿದರು.
ಸಮಾವೇಶದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಕಾರ್ಯವನ್ನು ವ್ಯವಸ್ಥಿತಗೊಳಿಸಬೇಕು. ಕಾರ್ಯಕ್ರಮ ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಛತೆ, ಶೌಚಗೃಹ ವ್ಯವಸ್ಥೆ ಮಾಡಬೇಕು. ಸಮಾವೇಶಕ್ಕೆ ಜನರು ಹೆಚ್ಚಾಗಿ ಸೇರುವುದರಿಂದ ವೇದಿಕೆಯ ಕಾರ್ಯಚಟುವಟಿಕೆಗಳನ್ನು ಪ್ರತಿಯೊಬ್ಬರೂ ವೀಕ್ಷಿಸಲು ಅನುಕೂಲವಾಗುವಂತೆ ಬೃಹತ್ ಎಲ್ಇಡಿ ಪರದೆ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಶಾಸಕರು ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಹಾಗೂ ಇತರರು ಉಪಸ್ಥಿತರಿದ್ದರು.