ಕಾಳ್ಗಿಚ್ಚು ತಡೆಗೆ ಜನರ ಸಹಕಾರ ಅಗತ್ಯ

11rajesh1
Published on

ಚಾಮರಾಜನಗರ: ಮಾನವ ನಿರ್ಮಿತವೋ ಅಥವಾ ಆಕಸ್ಮಿಕವಾಗಿಯೋ ಸಂಭವಿಸುತ್ತಿರುವ ಕಾಳ್ಗಿಚ್ಚಿನಿಂದಾಗಿ ಅರಣ್ಯ ಪ್ರದೇಶ ನಲುಗುತ್ತಿದ್ದು, ದಿನೇ ದಿನೆ ಹೆಚ್ಚಾಗುತ್ತಿರುವ ಬೇಸಿಗೆಯಲ್ಲಿ ಮತ್ತಷ್ಟು ಅನಾಹುತಗಳನ್ನು ತಪ್ಪಿಸಲು ಅರಣ್ಯ ಇಲಾಖೆ ಜಾಗೃತವಾಗಬೇಕಿದೆ.

ಜಿಲ್ಲೆ ಶೇ.50 ಕ್ಕಿಂತಲೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಬಂಡೀಪುರ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತಾ ಪ್ರದೇಶ ಸೇರಿದಂತೆ 4 ವನ್ಯಜೀವಿ ಅರಣ್ಯ ಪ್ರದೇಶ ವಿಭಾಗಗಳು ಇದೆ. ಈಗಾಗಲೇ ಅರಣ್ಯ ಇಲಾಖೆ ಕಾಳ್ಗಿಚ್ಚು ತಡೆಗಟ್ಟುವ ನಿಟ್ಟಿನಲ್ಲಿ ಬೆಂಕಿರೇಖೆ ನಿರ್ಮಾಣ, ವಾಚರ್‌ಗಳ ನೇಮಕ ಹಾಗೂ ಇನ್ನಿತರೆ ಸಿದ್ಧತೆಗಳನ್ನು ಕೈಗೊಂಡಿದೆ. ಅದಾಗ್ಯೂ ಇತ್ತೀಚೆಗೆ ಬಿಆರ್‌ಟಿಯ ಪುಣಜನೂರು ವಲಯದ ಮೂರು ಕಡೆಗಳಲ್ಲಿ ಏಕಕಾಲಕ್ಕೆ ಬೆಂಕಿ ಕಾಣಿಸಿಕೊಂಡು ಆತಂಕ ಮನೆ ಮಾಡಿತ್ತು. ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ 40-50 ಎಕರೆ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಹೇಳಲಾಗಿತ್ತು.

ಆದರೆ ಅದನ್ನೂ ಮೀರಿ ಹೆಚ್ಚಿನ ಪ್ರದೇಶ ಸುಟ್ಟುಹೋಗಿದೆ ಎಂದು ಅಂದಾಜಿಸಲಾಗಿತ್ತು. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬಿಆರ್‌ಟಿಯಲ್ಲಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪರಿಶೀಲನೆ ಮಾಡಲು ಸೂಚನೆಯನ್ನು ನೀಡಿದ್ದರು.
ಈ ಹಿಂದೆ 2019ರಲ್ಲಿ ಬಂಡೀಪುರ ಕಾಳ್ಗಿಚ್ಚಿಗೆ ನಲುಗಿಹೋಗಿತ್ತು. ಅಂತಹ ಅವಘಡಗಳು ಮರುಕಳುಹಿಸಿದಂತೆ ಅರಣ್ಯ ಇಲಾಖೆ ಎಷ್ಟೇ ಕ್ರಮಕೈಗೊಂಡರೂ ಅರಣ್ಯದಲ್ಲಿ ಅಗ್ನಿ ಅವಘಡ ಸಂಭವಿಸುತ್ತಲೇ ಇದೆ. ಈ ಸಂಬಂಧ ದಿಢೀರ್ ಕಾಣಿಸಿಕೊಳ್ಳುವ ಕಾಳ್ಗಿಚ್ಚಿಗೆ ಕಾರಣವೇನು? ಅದನ್ನು ತೆಡೆಗಟ್ಟಲು ಪರಿಹಾರಗಳು ಏನು? ಎಂಬುದರ ಕುರಿತು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಜನರೊಂದಿಗೆ ಉತ್ತಮ ಸಂಪರ್ಕ ಮುಖ್ಯ
ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬೆಂಕಿರೇಖೆಯನ್ನು ಮಾಡಲಾಗಿದೆ. ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ಕಾಡಿನ ಒಳಗೆ ತೆರಳಲು ರಸ್ತೆಗಳನ್ನು ಸರಿಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ೈಯರ್ ವಾಚರ್ಸ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ನೆಟ್‌ವರ್ಕ್ ಲಭ್ಯವಾಗದ ಕೆಲವು ಪ್ರದೇಶಗಳಲ್ಲಿ ತಕ್ಷಣದ ಮಾಹಿತಿ ಲಭ್ಯತೆಗಾಗಿ ವಾಕಿಟಾಕಿಗಳನ್ನು ಸಿದ್ಧಗೊಳಿಸಿದ್ದೇವೆ. ಬೆಂಕಿ ನಂದಿಸಲು ಬೇಕಾದ ಎಲ್ಲ ಉಪಕರಣಗಳನ್ನು ಖರೀದಿ ಮಾಡಲಾಗಿದೆ. ಕಾಡಂಚಿನಲ್ಲಿ ಹಾಗೂ ಕಾಡಿನ ನಡುವೆ ವಾಸಿಸುವ ಜನರೊಂದಿಗೆ ಅರಣ್ಯ ಇಲಾಖೆ ಉತ್ತಮ ಸಂಪರ್ಕ ಸಾಧಿಸುವುದು ಬಹುಮುಖ್ಯವಾಗುತ್ತದೆ. ಈ ಮೂಲಕ ಕಾಳ್ಗಿಚ್ಚು ತಡೆಗೆ ಪ್ರಯತ್ನ ಮಾಡುತ್ತಿದ್ದೇವೆ.
ಸಂತೋಷ್ ಕುಮಾರ್, ಡಿಸಿಎ್, ಮಲೆಮಹದೇಶ್ವರ ವನ್ಯಜೀವಿಧಾಮ, ಕೊಳ್ಳೇಗಾಲ

ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ
ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ಕೆಲವರು ಬೇಸಿಗೆ ವೇಳೆಯಲ್ಲಿ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಾರೆ. ಅಧಿಕಾರಿಗಳ ನಡುವೆ ಕೆಲವು ಬಾರಿ ತಿಕ್ಕಾಟಗಳು ಇದ್ದಾಗಲೂ ಕಾಡಿಗೆ ಬೆಂಕಿ ಹಾಕುವ ಕೃತ್ಯಗಳು ನಡೆಯುತ್ತಿರುತ್ತವೆ. ಸುವರ್ಣಾವತಿ ಹೊಳೆಯ ಹಂಚಿನಲ್ಲಿ ಜಮೀನು ಮಾಡುವ ಉದ್ದೇಶದಿಂದ ಅನೇಕರು ಬಿದಿರಿಗೆ ಬೆಂಕಿ ಹಾಕುತ್ತಿದ್ದಾರೆ. ಅಂತಹವರ ಮೇಲೆ ಅರಣ್ಯ ಇಲಾಖೆ ಕ್ರಮವಹಿಸದೇ ಇರುವುದು ಇದಕ್ಕೆ ಕಾರಣವಾಗುತ್ತಿದೆ. ಅರಣ್ಯದಲ್ಲಿ ಕಾಳ್ಗಿಚ್ಚು ತಡೆಯುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ವಾಚರ್‌ಗಳು ಮುಂಜಾಗ್ರತೆ ವಹಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣವಾಗುತ್ತಿದೆ.
ಪುಣಜನೂರು ದೊರೆಸ್ವಾಮಿ, ಪರಿಸರವಾದಿ, ಚಾಮರಾಜನಗರ

ಹೆಚ್ಚಿನ ನೆರವು ಅಗತ್ಯ
ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ಹೆಚ್ಚಾಗಿ ಸಂಭವಿಸುವುದಕ್ಕೆ ಮಾನವನ ಪಾತ್ರವೇ ಹೆಚ್ಚಾಗಿ ಕಂಡು ಬರುತ್ತದೆ. ಅದನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಬೇಸಿಗೆ ಸಮಯದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ಕಾಡಂಚಿನ ಪ್ರದೇಶ ಸೇರಿದಂತೆ ಪೋಡುಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯ ಇಲಾಖೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ಮಾಡಲಾಗಿದೆ. ಕಾಡಿನ ಸಂಪತ್ತಿನ ಸಂರಕ್ಷಣೆ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲಾಗುತ್ತಿದೆ.
ನಾಗೇಂದ್ರ ನಾಯಕ್, ಆರ್‌ಎಫ್‌ಒ, ಬಿಆರ್‌ಟಿ, ಯಳಂದೂರು ವಲಯ.

ಆಧುನಿಕ ತಂತ್ರಜ್ಞಾನ ಬಳಸಬೇಕು
ಅರಣ್ಯ ಪ್ರದೇಶದಲ್ಲಿ ಬೇಸಿಗೆ ಸಮಯದಲ್ಲಿ ಕಾಳ್ಗಿಚ್ಚು ಹೆಚ್ಚಾಗಿ ಸಂಭವಿಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ವಾಚರ್‌ಗಳನ್ನು ಹೆಚ್ಚು ನಿಯೋಜನೆ ಮಾಡಬೇಕು. ಡ್ರೋನ್ ಹಾಗೂ ಇನ್ನಿತರ ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಬೇಕು. ಹೆಚ್ಚಾಗಿ ಅಗ್ನಿಶಾಮಕ ವಾಹನಗಳನ್ನು ಬಳಕೆ ಮಾಡಿಕೊಳ್ಳಬೇಕು. ಈಗ ಮುಂಜಾಗ್ರತೆ ಕ್ರಮಗಳನ್ನು ವಹಿಸುವಂತೆ ಬೇಸಿಗೆಗೂ ಮುನ್ನ ಕಾಡಂಚಿನಲ್ಲಿರುವ ಕೆರೆಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕು. ನೀರು ತುಂಬಿಸುವ ಯೋಜನೆಯನ್ನು ಮತ್ತಷ್ಟು ವಿಸ್ತಾರ ಮಾಡಬೇಕು. ಆಗ ಕಾಡು ಸದಾಕಾಲವೂ ಹಚ್ಚ ಹಸಿರಿನಿಂದ ಕೂಡಿ ಅಗ್ನಿ ಅವಘಡಗಳು ತಪ್ಪುತ್ತದೆ.
ಪುಟ್ಟರಂಗೇಗೌಡ, ಸೋಲಿಗ ಜನಾಂಗದ ಮುಖಂಡ, ಬಿಳಿಗಿರಿರಂಗನ ಬೆಟ್ಟ

ಗಿರಿಜನರ ಸಹಕಾರ ಅಗತ್ಯ
ಅರಣ್ಯ ಪ್ರದೇಶ ಸಮೃದ್ಧಿಯಿಂದ ಕೂಡಿರಬೇಕು. ಆದ್ದರಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳದಂತೆ ತಡೆಗಟ್ಟಲು ಇಲಾಖೆಯ ಅಧಿಕಾರಿಗಳು ಆಯಾ ಕಟ್ಟಿನ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ರಸ್ತೆ ಬದಿ ಬೆಂಕಿ ರೇಖೆ ನಿರ್ಮಿಸಬೇಕು. ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಧೂಮಪಾನ ಮಾಡುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಇದರಿಂದ ಕಾಡಿಗೆ ಬೆಂಕಿ ಬೀಳದಂತೆ ತಡೆಗಟ್ಟಬಹುದು. ಮಾನವ ನಿರ್ಮಿತ ಕಾಳ್ಗಿಚ್ಚು ಉಂಟಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಬೇಕು. ಬೆಂಕಿ ಬೀಳದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಕಾಳ್ಗಿಚ್ಚು ತಡೆಗೆ ಗಿರಿಜನರ ಸಹಕಾರ ಪಡೆಯಬೇಕು.
ಚಂದ್ರು, ಸೋಲಿಗ ಮುಖಂಡ, ಮಾವತ್ತೂರು, ಹನೂರು

ಹಲವು ಯೋಜನೆಗಳು ಸಹಕಾರಿ
ಅರಣ್ಯದ ಅಳಿವು-ಉಳಿವು ಕಾಡಂಚಿನ ಗ್ರಾಮಗಳ ಜನರ ಕೈಯಲ್ಲಿರುತ್ತದೆ. ಜನರ ಸಹಕಾರ ಇಲ್ಲದೆ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳ ಜನರ ಸಹಕಾರ ಪಡೆದುಕೊಳ್ಳುತ್ತಿದೆ. ಅರಣ್ಯ ಹಾಗೂ ವನ್ಯಜೀವಿ ಮಹತ್ವದ ಬಗ್ಗೆ ತುಂಬಾ ಪರಿಣಾಮಕಾರಿಯಾಗಿ ಅರಿವು ಮೂಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ, ಯುವ ಮಿತ್ರ, ರೈತಮಿತ್ರ ಯೋಜನೆಗಳು ಹಾಗೂ ಆದಿವಾಸಿಗಳ ಸಹಕಾರ ಪಡೆದು ಅರಣ್ಯ ಸಂರಕ್ಷಣೆ ಮಾಡಲಾಗುತ್ತಿದೆ.
ಡಾ.ಪಿ.ರಮೇಶ್ ಕುಮಾರ್, ನಿರ್ದೇಶಕ, ಬಂಡೀಪುರ ಹುಲಿ ಯೋಜನೆ, ಗುಂಡ್ಲುಪೇಟೆ.

ಮಾನವನ ದುರಾಸೆ ಕಾರಣ
ಈ ಹಿಂದೆ ಮಾನವನ ಅಜ್ಞಾನ, ಸ್ವಾರ್ಥ ಮತ್ತು ದುರಾಸೆಯಿಂದ ಅರಣ್ಯ ಭೂಮಿ ಅತಿಕ್ರಮಣ ಹಾಗೂ ಕಳ್ಳಬೇಟೆಗಾಗಿ ಕಾಡಿಗೆ ಬೆಂಕಿ ಹಚ್ಚಲಾಗುತ್ತಿತ್ತು. ಆದರೆ ಇತ್ತೀಚಿಗೆ ಮಾನವ ವನ್ಯಜೀವಿ ಸಂಘರ್ಷ, ಅಧಿಕಾರಿಗಳ ಅಸಹಕಾರ, ಬೆಳೆಹಾನಿ, ಜಾನುವಾರುಗಳಿಗೆ ಮೇವಿನ ಕೊರತೆಯ ಕಿಚ್ಚಿನಿಂದ ಕಾಡಿಗೆ ಬೆಂಕಿ ಹಚ್ಚುವ ಪ್ರವೃತ್ತಿ ಕಾಣಿಸುತ್ತಿದೆ. ಅರಣ್ಯ ಇಲಾಖೆ ಕಾಡಂಚಿನ ಜನರಿಗೆ ಅರಣ್ಯದ ಉಪಯೋಗ ಹಾಗೂ ಮಹತ್ವ ತಿಳಿಸುವ ಜತೆಗೆ ಬೆಳೆ ಹಾಗೂ ಜಾನುವಾರು ನಷ್ಟಕ್ಕೆ ಕೂಡಲೇ ಪರಿಹಾರ ನೀಡುವ ಮೂಲಕ ಮುಂದಾಗಬೇಕು.
ಶ್ರೀಕಂಠ, ನ್ಯಾಚುರಲಿಸ್ಟ್, ವನಂ ಸಂಸ್ಥೆ, ಗುಂಡ್ಲುಪೇಟೆ

ಕಠಿಣ ಶಿಕ್ಷೆ ನೀಡಬೇಕು
ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತಾ ಪ್ರದೇಶ ಒಳಗೊಂಡಂತೆ 4 ವನ್ಯಜೀವಿ ಅರಣ್ಯ ಪ್ರದೇಶದ ವಿಭಾಗಗಳು ಇದೆ. ಅರಣ್ಯ ಸಂಪತ್ತಿನ ಸಂರಕ್ಷಣೆ ಮಾಡಬೇಕಿದೆ. ಕಳೆದ 1 ವಾರದಿಂದ ಬಿಆರ್‌ಟಿ ಹಾಗೂ ಇತರ ಕಡೆ ಬೆಂಕಿ ಕಾಣಿಸಿಕೊಂಡು ಮರ-ಗಿಡಗಳು ಸುಟ್ಟು ಹೋಗಿದೆ. ಆದ್ದರಿಂದ ಅರಣ್ಯ ಇಲಾಖೆ ಇದರ ತಡೆಗೆ ಹೆಚ್ಚಿನ ರೀತಿ ಶ್ರಮಿಸಬೇಕು. ಸರ್ಕಾರ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಸೌಲಭ್ಯಗಳನ್ನು ಜಿಲ್ಲೆಗೆ ನೀಡಬೇಕು. ಕಾರ್ಯಪಡೆಗಳನ್ನು ಹೆಚ್ಚು ನಿಯೋಜನೆ ಮಾಡಿ ಸುಸಂಘಟಿತ ಅಗ್ನಿಶಾಮಕ ತಂತ್ರವನ್ನು ಅಭಿವೃದ್ಧಿಪಡಿಸಬೇಕು. ಬೆಂಕಿ ಪ್ರಕರಣದಲ್ಲಿ ಮಾನವ ನಿರ್ಮಿತ ಕೃತ್ಯವೆಂದು ತಿಳಿದರೆ ಅಂತಹವರಿಗೆ ಶಿಕ್ಷೆ ನೀಡಬೇಕು. ಇದರಿಂದ ಈ ಕೃತ್ಯ ಗಳಿಗೆ ಕಡಿವಾಣ ಬೀಳಲಿದೆ.
ಎಸ್.ವಿನುತಾ, ತೃತೀಯ ಬಿಕಾಂ ವಿದ್ಯಾರ್ಥಿನಿ, ಜೆಎಸ್‌ಎಸ್ ಕಾಲೇಜು, ಮಧುವನಹಳ್ಳಿ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net