

ಚಾಮರಾಜನಗರ: ತಮಿಳುನಾಡಿಗೆ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಭಾನುವಾರ ರಸ್ತೆ ತಡೆ ನಡೆಸಲಾಯಿತು.
ನಗರದ ಸೋಮವಾರಪೇಟೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಸಂಚಾರಕ್ಕೆ ಅಡ್ಡಿಪಡಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯದಲ್ಲಿ ತೀವ್ರವಾದ ಬರಗಾಲವಿದ್ದು, ಜಲಾಶಯಗಳಲ್ಲಿ ಕೇವಲ 16 ಟಿಎಂಸಿ ನೀರು ಲಭ್ಯವಿದೆ. ಕುಡಿಯುವ ನೀರನ್ನು ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಒಲೈಸಿ, ಇಂಡಿಯಾ ಮೈತ್ರಿ ಕೂಟವನ್ನು ಸಂತೃಪ್ತಿಪಡಿಸುವ ಸಲುವಾಗಿ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ 223 ತಾಲೂಕುಗಳಲ್ಲಿ ಬರವಿದ್ದು, ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಕುಡಿಯಲು ನೀರಿಲ್ಲ. ಕೆರೆಕಟ್ಟೆಗಳಿಗೆ ನೀರು ತಂಬಿಸುತ್ತಿಲ್ಲ. ಈ ಭಾಗದ ಜನ, ಜಾನುವಾರು, ಪಶುಪಕ್ಷಿಗಳಿಗೆ ನೀರು ಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲೂ ನ್ಯಾಯಾಲಯದ ಆದೇಶ ಇದೆ ಎಂದು ಹೇಳಿ ತೀವ್ರ ಸಂಕಷ್ಟದಲ್ಲಿ ಇದ್ದರೂ, ನಾಲೆಗಳಿಗೆ ನೀರು ಬಿಡದೆ, ನದಿ ಮೂಲಕ ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದ ಜಲಾಶಯಗಳನ್ನು ಬರಿದು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ, ನೀರಾವರಿ ಸಚಿವರಿಗೆ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ನಾವು ಕೃಷಿಗಾಗಿ ನೀರನ್ನು ಕೇಳುತ್ತಿಲ್ಲ. ಕುಡಿಯುವ ನೀರನ್ನು ಉಳಿಸುವಂತೆ ಕುಡಿಯುವ ನೀರಿಗೆ ಗ್ಯಾರಂಟಿ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಕೇಳುತ್ತಿದ್ದೇವೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಾಕುವುದನ್ನು ಸರ್ಕಾರ ಕೈ ಬಿಟ್ಟು ರಾಜ್ಯದ ಜನತೆಗೆ ಕುಡಿಯುವ ನೀರು ಉಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ , ಹಾಡ್ಯರವಿ, ಡಾ.ಹನುಮಯ್ಯ, ಉಡಿಗಾಲ ಮಂಜುನಾಥ್, ಛೇರ್ಮನ್ ಗುರು,ಮಲ್ಲಪ್ಪ ಅರಳಿಕಟ್ಟೆ, ಕುಮಾರ್ , ಕನಕ ಜನ್ನೂರು, ಶಾಂತರಾಜು ಮುದ್ದಹಳ್ಳಿ, ಚಿಕ್ಕ ಸ್ವಾಮಿ, ಶಿವಣ್ಣ ದೇವನೂರು, ನಾಗೇಂದ್ರ ಅಂಬಳೆ, ಮಹದೇವಸ್ವಾಮಿ, ಒಳಗೆರೆಗಣೇಶ್, ಮಲಿಯೂರು ಮಹೇಂದ್ರ , ಪ್ರವೀಣ್, ಸಿದ್ದರಾಜು, ಸತೀಶ್ ಹಾಗೂ ಇತರರು ಭಾಗವಹಿಸಿದ್ದರು.