

ಚಾಮರಾಜನಗರ: ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶವೆಂದು ಹೆಸರುವಾಸಿಯಾಗಿರುವ ಬಂಡೀಪುರ ಅಂತಾರಾಜ್ಯ ಸಮನ್ವಯಕ್ಕೂ ಪ್ರಥಮ ವೇದಿಕೆಯಾಯಿತು.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಾರಿ ಸ್ವಾಗತ ಕೇಂದ್ರದ ಆವರಣದಲ್ಲಿ ಭಾನುವಾರ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕೇರಳ ಅರಣ್ಯ ಸಚಿವ ಶಶೀಂದ್ರನ್ ಮತ್ತು ತಮಿಳುನಾಡಿನ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಅಂತಾರಾಜ್ಯ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿದರು. ಈ ಸಭೆ ಹಿಂದೆಂದೂ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಎರಡೂ ರಾಜ್ಯಗಳ ಅರಣ್ಯ ಸಚಿವರು ಮತ್ತು ಮೂರೂ ರಾಜ್ಯಗಳ ಅರಣ್ಯಧಿಕಾರಿಗಳು ಸಭೆ ನಡೆಸಿ ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಚರ್ಚೆ, ವಿಷಯ ವಿನಿಮಯ, ನಿರ್ಣಯಗಳನ್ನು ಕೈಗೊಂಡರು.
ಕರ್ನಾಟಕ ತಮಿಳುನಾಡು ಮತ್ತು ಕೇರಳ ಗಡಿಗಳನ್ನು ಹಂಚಿಕೊಂಡಿವೆ. ಇಲ್ಲಿನ ವನ್ಯಜೀವಿಗಳು ಅಲ್ಲಿಗೆ, ಅಲ್ಲಿನ ಕಾಡುಪ್ರಾಣಿಗಳು ಇಲ್ಲಿಗೆ ಸಂಚಾರ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮೂರು ರಾಜ್ಯಗಳ ಅರಣ್ಯ ಇಲಾಖೆ ಸಮನ್ವಯತೆ ಸಾಧಿಸುವ ಅಗತ್ಯವಿತ್ತು. ಇದನ್ನು ಸಭೆ ಕಾರ್ಯಸಾಧು ಮಾಡಿದೆ. ಆದರೆ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆಯೇ ಮುಂದಿನ ದಿನಗಳಲ್ಲಿ ಸಮನ್ವಯತೆ ಸಾಧಿಸಿ ಮೂರೂ ರಾಜ್ಯಗಳ ಅರಣ್ಯ ಇಲಾಖೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಿದೆ.