ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಸ್ಮರಣೆ ಅತ್ಯಗತ್ಯ

010
Published on

ಚಾಮರಾಜನಗರ:ರಾಜ್ಯದ ಅಭಿವೃದ್ಧಿಯ ದೃಷ್ಠಿಯಲ್ಲಿ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಜೀವನ ಸಾಧನೆ ಸ್ಮರಣೆ ಅತ್ಯಗತ್ಯ ಎಂದು ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಜಗತ್ತಿನ ಗಮನ ಸೆಳೆಯುತ್ತಿರುವ ರಾಜಧಾನಿ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಜೀವನ ಎಲ್ಲರಿಗೂ ಸ್ಪೂರ್ತಿಯಾಗಬೇಕು. ಅವರ ಸಾಧನೆಗಳನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಇತ್ತೀಚಿಗೆ ರಾಜಧಾನಿಯಲ್ಲಿ ಬೃಹತ್ ಪ್ರತಿಮೆಯನ್ನು ನಿರ್ಮಾಣಮಾಡಲಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ. ಕೆಂಪೇಗೌಡರ ನಿಸ್ವಾರ್ಥವಾದ ಸಾಧನೆಗೆ ದಕ್ಕಿರುವ ಲ ಇದು. ಒಂದು ಮಹಾನಗರವನ್ನು ಕಟ್ಟಿ, ಜನರಿಗೆ ಉದ್ಯೋಗ ಸೃಷ್ಠಿಬೇಕು ಎಂಬ ಕೆಂಪೇಗೌಡರ ಕನಸು ಇಂದು ನನಸಾಗಿದೆ. ಅವರ ದೂರದೃಷ್ಠಿಯ ಆಡಳಿತದಿಂದ ಇಂದು ಬೆಂಗಳೂರು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಲ್ಪಡುತ್ತಿದೆ ಎಂದು ತಿಳಿಸಿದರು.

ಸಮಾಜ ಸುಧಾರಕರು, ದಾರ್ಶನಿಕರು, ಶರಣರು ಹಾಗೂ ಇತಿಹಾಸದಲ್ಲಿ ಉಳಿದುಹೋದ ರಾಜರ ಜೀವನ ಚರಿತ್ರೆಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಕೆಂಪೇಗೌಡರ ಜನಪರ ಕೆಲಸಗಳು, ಸಮಾಜಮುಖಿ ಕಾರ್ಯಗಳು ಇಂದಿಗೂ ನಮ್ಮ ಕಣ್ಣಮುಂದಿದೆ. ತಮ್ಮ ಜೀವಮಾನವಿಡೀ ಜನಸಮುದಾಯದ ಏಳ್ಗೆಗಾಗಿ ಬದುಕಿದ ಕೆಂಪೇಗೌಡರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಿದರೆ ಇಂತಹ ಕಾರ್ಯಕ್ರಮಗಳ ಆಯೋಜನೆ ಸಾರ್ಥಕವಾಗುತ್ತದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಜಯಲಕ್ಷ್ಮೀ ಸೀತಾರಾಮ್ ಮಾತನಾಡಿ, ನಾಡಪ್ರಭು ಕೆಂಪೇಗೌಡ ದ್ವೇಷ ರಹಿತ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದರು. ಅವರ ಜೀವನ ಸಾಧನೆ ಕುರಿತಾಗಿ ಸಾಕಷ್ಟು ಕೃತಿಗಳು ಹೊರಬಂದಿದೆ. ಜಾನಪದ ಕಾವ್ಯಗಳಲ್ಲಿ ಕೆಂಪೇಗೌಡರ ಸಾಧನೆಗಳನ್ನು ಶ್ರೇಷ್ಠವಾಗಿ ಕಟ್ಟಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಕೆರೆಗಳು, ನೂರಾರು ಉದ್ಯಾನವನಗಳು ಹಾಗೂ ಕೋಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಂಪೇಗೌಡರ ಶೌರ್ಯ, ಪರಾಕ್ರಮ,ಜನಪರ ವ್ಯಕ್ತಿತ್ವ, ಸಮಾಜಮುಖಿ ಕೆಲಸಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಭುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುರುಲಿಂಗಯ್ಯ, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ, ಸಮುದಾಯದ ಮುಖಂಡರಾದ ಕರಿಯನಕಟ್ಟೆ ಚನ್ನಮುತ್ತು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net