ಕೆ.ಶಿವರಾಂ ಪತ್ನಿಗೆ ಟಿಕೆಟ್ ನೀಡಲು ಆಗ್ರಹ

09rajesh12
Published on

ಚಾಮರಾಜನಗರ: ನಿವೃತ್ತ ಐಎಎಸ್ ಅಧಿಕಾರಿ ದಿ.ಕೆ. ಶಿವರಾಂ ಅವರ ಪತ್ನಿ ವಾಣಿ ಕೆ.ಶಿವರಾಂ ಅವರಿಗೆ ಚಾ.ನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬೇಕೆಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಅಣಗಳ್ಳಿ ಬಸವರಾಜು ಒತ್ತಾಯಿಸಿದರು.

ಕೆ. ಶಿವರಾಂ ಅವರು ನಿವೃತ್ತಿ ನಂತರ ಕಳೆದ 10 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರೀಯವಾಗಿ ಪಕ್ಷದ ಎಲ್ಲಾ ಚುನಾವಣೆಗಳಲ್ಲಿ ಕೆಲಸ ಮಾಡಿದ್ದಾರೆ. ಈ ಬಾರಿ ಚಾ.ನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯುವ ಉತ್ಸಾಹದಲ್ಲಿದ್ದರು. ಬಿಜೆಪಿ ವರಿಷ್ಠರಾದ ಯಡಿಯೂರಪ್ಪ ಹಾಗೂ ಅನೇಕ ಮುಖಂಡರು ಸಹ ಕೆ. ಶಿವರಾಂ ಅವರಿಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ದುರದೃಷ್ಟವಶಾತ್ ಹೃದಯಘಾತದಿಂದ ಅಕಾಲಿಕ ಮರಣ ಹೊಂದಿದರು. ಈ ನಿಟ್ಟಿನಲ್ಲಿ ಅವರ ಸ್ಥಾನವನ್ನು ತುಂಬಲು ಪತ್ನಿ ವಾಣಿ ಕೆ.ಶಿವರಾಂ ಅವರಿಗೆ ಲೋಕಸಭಾ ಟಿಕೆಟ್ ನೀಡಬೇಕು ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಚಾ.ನಗರದಲ್ಲಿ ಜಿಲ್ಲಾ ಛಲವಾದಿ ಮಹಾಸಭಾದಿಂದ ಕೆ. ಶಿವರಾಂ ನಿಧನದ ಗೌರವಾರ್ಥ ಮಾ.13 ರಂದು ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ನಡೆಯವ ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು, ಶಿವರಾಂ ಅವರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಂಸರಾಜ್, ಜಿಲ್ಲಾ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಕೆ.ಆರ್.ನಾರಾಯಣ್, ಉತ್ತುವಳ್ಳಿ ಬಸವಣ್ಣ, ಮಂಟೇಸ್ವಾಮಿ, ಚಾಮರಾಜು, ಶುಭೋದಯ ಸಿದ್ದರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net