ಸಚಿವರಿಂದ ಸಿಎಂ ಸಮಾವೇಶದ ಸಿದ್ಧತೆ ಪರಿಶೀಲನೆ

IMG-20240309-WA0124
Published on

ಚಾಮರಾಜನಗರ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವು ಮಾ.12ರಂದು ನಗರದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಶನಿವಾರ ಸಿದ್ಧತೆ ಪರಿಶೀಲಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಸಿದ್ಧತೆಗಳನ್ನು ವೀಕ್ಷಿಸಿದರು. ಕ್ರೀಡಾಂಗಣದಲ್ಲಿ ಹೆಚ್ಚು ಜನರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ವೇದಿಕೆ, ಕುಡಿಯುವ ನೀರು ಇನ್ನಿತರ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಾವೇಶಕ್ಕಾಗಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಸಮಾವೇಶಕ್ಕೆ ಹೋಬಳಿ, ಗ್ರಾಮ ಪಂಚಾಯಿತಿಗಳಿಂದ ಫಲಾನುಭವಿಗಳನ್ನು ಕರೆತಂದು ಕಾರ್ಯಕ್ರಮ ಮುಗಿದ ನಂತರ ಕಳುಹಿಸಿಕೊಡಬೇಕು. ತಿಂಡಿ, ಊಟದ ವ್ಯವಸ್ಥೆ ಮಾಡಬೇಕು. ಯಾವುದೇ ಲೋಪ ಆಗಬಾರದು. ಇದಕ್ಕಾಗಿ ಹೋಬಳಿ, ತಾಲೂಕು ಮಟ್ಟದಲ್ಲಿಯೂ ಅಧಿಕಾರಿಗಳನ್ನು ನಿಯೋಜಿಸಿ ಸೂಕ್ತ ವ್ಯವಸ್ಥೆ ಮಾಡಬೇಕು. ಸಮಾವೇಶಕ್ಕೆ ಬಸ್‌ಗಳು ಹಾಗೂ ಇನ್ನಿತರ ಸಿದ್ಧತೆಗಳನ್ನು ಕೈಗೊಳ್ಳಬೇಕು. ಸಮಾವೇಶದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವುದರಿಂದ ವೇದಿಕೆಯ ಚಟುವಟಿಕೆಗಳು ಎಲ್ಲರಿಗೂ ಕಾಣುವಂತೆ ಮಾಡಲು ಬೃಹತ್ ಎಲ್‌ಇಡಿ ಪರದೆಗಳನ್ನು ಹಾಕಬೇಕು. ವೇದಿಕೆಯು ಆಕರ್ಷಕವಾಗಿ ಇರಬೇಕು. ಸಮಾವೇಶ ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಸಮಾವೇಶವನ್ನು ಯಶಸ್ವಿಗೊಳಿಸಲು ವೇದಿಕೆ, ಶಿಷ್ಟಾಚಾರ, ಆಹಾರ, ಸ್ವಚ್ಛತೆ, ಭದ್ರತೆ, ಆರೋಗ್ಯ, ಪ್ರಚಾರ, ಬಸ್‌ಗಳ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ. ಶಿವರಾತ್ರಿ ಹಬ್ಬದ ದಿನವಾದ ಶುಕ್ರವಾರವೂ ಅಧಿಕಾರಿಗಳು ಸಿದ್ಧ್ದತೆ ಕಾರ್ಯ ಕೈಗೊಂಡಿದ್ದರು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್, ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್ ಅವರು ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು, ಎಡಿಸಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net