

ಕೊಳ್ಳೇಗಾಲ: ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ವತಿಯಿಂದ ಪಟ್ಟಣದ ಎಂ.ಸಿ.ಕೆ.ಸಿ. ಪ್ರೌಢಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಮತ್ತು ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಇತ್ತೀಚೆಗೆ ಆಯೋಜಿಸಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಕಾರ್ಯಕ್ರಮ ಉದ್ಘಾಟಿಸಿದರು. ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಮತ್ತು ಬಲಿಷ್ಠವಾದ ಸಂವಿಧಾನವಾಗಿದೆ. ಸಂವಿಧಾನದಲ್ಲಿ ಮಕ್ಕಳ ರಕ್ಷಣೆ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಂತ ಮುಖ್ಯ ಅಂಶವಾಗಿದೆ. ಆದ್ದರಿಂದ ದುಡಿಯುವ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ದಾಖಲಿಸಬೇಕು. ದುಡಿಯುವ ಮಕ್ಕಳು ಕಂಡು ಬಂದರೆ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್. ನಂದಿನಿ ಮಾತನಾಡಿ , ಮಕ್ಕಳು ದೇಶದ ಆಸ್ತಿ. ಮಕ್ಕಳ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ. ಶಿಕ್ಷಣದಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಆದ್ದರಿಂದ ಎಲ್ಲ ಮಕ್ಕಳು ವಿದ್ಯಾವಂತರಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಸೀಮಾ ತಹಸೀನ್ ಸುಲ್ತಾನಾ, ಕಾರ್ಯದರ್ಶಿ ಮೋಹನ್, ಕಾರ್ಮಿಕ ನಿರೀಕ್ಷಕ ಪ್ರಸಾದ್, ಎಂ.ಸಿ.ಕೆ.ಸಿ. ಶಾಲೆಯ ಮುಖ್ಯ ಶಿಕ್ಷಕ ಶಿವರಾಜ್, ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕ ಮಹೇಶ್ ಇದ್ದರು.