ಬೆಟ್ಟಳ್ಳಿ ಮಾರಮ್ಮನಿಗೆ ವಿಶೇಷ ಪೂಜೆ, ಆರತಿ

08 HANUR 2
Published on

ಹನೂರು: ಶಿವರಾತ್ರಿ ಹಬ್ಬದ ವಿಶೇಷವಾಗಿ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಶುಕ್ರವಾರ ದೇವಿಗೆ ವಿಶೇಷ ದೀಪದಾರತಿ ಬೆಳಗಿಸಿ ಪೂಜೆ ಸಲ್ಲಿಸಲಾಯಿತು. ಗ್ರಾಮದ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೇಗುಲವನ್ನು ತಳೀರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೆಳಗಿನ ಜಾವ 5ಗಂಟೆಗೆ ದೇವಿಗೆ ಪನ್ನೀರು, ಎಳನೀರು, ಜೇನುತುಪ್ಪ, ಹಾಲು, ಮೊಸರು, ಅರಿಸಿಣ, ಕುಂಕುಮ ಹಾಗೂ ಗಂಧದ ಅಭಿಷೇಕ ನೆರವೇರಿಸಲಾಯಿತು. ವಿಗ್ರಹ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ 350 ವಿವಿಧ ದೀಪಗಳಿಂದ ಆರತಿ ಬೆಳಗಿಸಲಾಯಿತು. ಬಳಿಕ ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ನೈವೇದ್ಯ ಅರ್ಪಿಸಿ ಧೂಪಧಾರತಿ, ಕೊಬ್ಬರಿ, ಬೆಲ್ಲ, ನಿಂಬೆಹಣ್ಣಿನ ಆರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ನೀಡಲಾಯಿತು.

ಪಟ್ಟಣ ಸೇರಿದಂತೆ ಭೈರನತ್ತ, ಉದ್ದನೂರು, ಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರ ಕಡೆಗಳಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ಇನ್ನು ಮಹಾ ಶಿವರಾತ್ರಿ ಅಂಗವಾಗಿ ತಾಲೂಕಿನ ವೈಶ್ಯಂಪಾಳ್ಯ ಶ್ರೀ ಶಿವಲಂಕಾರೇಶ್ವರ ದೇಗುಲ, ಬಂಡಳ್ಳಿಯ ನಾರಾಯಣಸ್ವಾಮಿ, ಲೊಕ್ಕನಹಳ್ಳಿಯ ಶ್ರೀ ಸಂಪಿಗೇಶ್ವರ, ಮಂಗಲದ ಕೋಣನ ಮಾರಮ್ಮ, ವೀರಭದ್ರೇಶ್ವರ, ಕೌದಳ್ಳಿಯ ಮಹದೇಶ್ವರ ಹಾಗೂ ಈ ಭಾಗದ ಇನ್ನಿತರೆ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net