

ಚಾಮರಾಜನಗರ: ಮಹಿಳೆಯರು ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಸಮಾಜದಲ್ಲಿ ಬದಲಾವಣೆ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿರುವ ವಕೀಲರಾದ ರಮೇಶ್ ಅವರ ಪುತ್ರಿ ಮಧುಶ್ರೀ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ಸನ್ಮಾನಿಸಿ ಮಾತನಾಡಿದರು.
ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದರೆ ಮಾತ್ರ ಉತ್ತಮ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಗಡಿಜಿಲ್ಲೆಯಲ್ಲಿ ಮಧುಶ್ರೀ ಸ್ವಂತ ಪರಿಶ್ರಮದಿಂದ ನ್ಯಾಯಾಂಗ ಇಲಾಖೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನ್ಯಾಯಾಧೀಶರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಸಮಾಜದಲ್ಲಿ ಪುರುಷರಷ್ಠೆ ಸಮಾನವಾಗಿ ಮಹಿಳೆಯರು ಸಾಧನೆ ಮಾಡಿದ್ದಾರೆ. ಗಗನಯಾನ, ವೈದ್ಯಕೀಯ, ಇಂಜಿನಿಯರಿಂಗ್ ಹೀಗೆ ಹತ್ತಹಲವು ಕ್ಷೇತ್ರಗಳಲ್ಲಿ ಅವರ ಸಾಧನೆ ಹೆಜ್ಜೆ ಗುರುತಾಗಿ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ರಮೇಶ್, ಶಿಕ್ಷಕಿ ಸುವರ್ಣಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಿವಲೀಲಾ ಬೆಟಗೇರಿ, ಚಿರಂತ್, ನಿರಂತ್ ಹಾಜರಿದ್ದರು.