

ಚಾಮರಾಜನಗರ: ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಶೇ.25 ರಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಿ ಎಂದು ಗುತ್ತಿಗೆದಾರ ಸಿ.ಕೆ.ಮಂಜುನಾಥ್ ಒತ್ತಾಯಿಸಿದರು.
ಎಸ್‌ಇಪಿ/ಟಿಎಸ್‌ಪಿ 2013-17 ಕಾಯ್ದೆಯಂತೆ, ಸರ್ಕಾರ ಈ ಸಮುದಾಯಗಳ ಜನಸಂಖ್ಯೆಗೆ ಅನುಸಾರ ಹೆಚ್ಚಿನ ಅನುದಾನವನ್ನು ಹಂಚಿಕೆ ಮಾಡಿ, ಕಲ್ಯಾಣ ಕಾರ್ಯಕ್ರಮಗಳಿಗೆ ನಿಗದಿಮಾಡಬೇಕಿತ್ತು. ಆದರೆ ಹಿಂದಿನ ಸರ್ಕಾರ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡಬೇಕಿತ್ತು. ಈಗ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಶೆ.25ರಷ್ಟು ಅನುದಾನವನ್ನು ಪ.ಜಾ ಹಾಗೂ ಪ.ಪಂ ಸಮುದಾಯಗಳ ಜನಕಲ್ಯಾಣಕ್ಕೆ ಮೀಸಲಿಡಬೇಕು ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಹಿಂದಿನ ಸರ್ಕಾರಗಳು ಎಸ್ಸಿಪಿ/ಟಿಎಸ್ಪಿ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದರ ಮೂಲಕ ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ತೊಡಕಾಗಿದ್ದರು. ಕಾಂಗ್ರೆಸ್ ಸರ್ಕಾರ ಸೆಕ್ಷನ್ 7ಡಿಯನ್ನು ರದ್ದುಗೊಳಿಸುವುದರ ಮೂಲಕ ಎಸ್ಸಿ,ಎಸ್ಟಿ ಸಮುದಾಯಗಳ ಪಾಲಿನ ಅನುದಾನ ದುರ್ಬಳಕೆ ಆಗುವುದನ್ನು ತಡೆಯಬೇಕು. ಸಮುದಾಯದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ಹಾಗೂ ಲ್ಯಾಪ್‌ಟಾಪ್‌ಗಳನ್ನು ಹಿಂದಿನ ಸರ್ಕಾರ ತಡೆಹಿಡಿದಿದ್ದು ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ನಲ್ಲೂರು ಮಹದೇವಸ್ವಾಮಿ, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್, ದಲಿತ ಮುಖಂಡ ಕೆ.ಎಂ.ನಾಗರಾಜ್, ಕೆ.ಆರ್.ನಾರಾಯಣ್, ಶೇಷಣ್ಣ, ಸಿ.ಎಂ.ಶಿವಣ್ಣ ಹಾಜರಿದ್ದರು.