

ಚಾಮರಾಜನಗರ: ಈ ಹಿಂದೆ ರಾಸಾಯನಿಕ ಗೊಬ್ಬರ ಬಳಸಿ ಬೇಸಾಯ ಮಾಡುತ್ತಿದ್ದ ಕೃಷಿಕರೊಬ್ಬರು ಸಾವಯವ ಬೇಸಾಯಕ್ಕೆ ಹೊರಳಿದ್ದು, ಉತ್ತಮ ಇಳುವರಿಯೊಂದಿಗೆ ಲಾಭವನ್ನು ಕಾಣುತ್ತಿದ್ದಾರೆ.
ತಾಲೂಕಿನ ಹೆಬ್ಬಸೂರು ಗ್ರಾಮದ ಸಮೀಪದಲ್ಲೇ ಇರುವ ಕಾಣೀಕೆರೆಯ ನಂಜಶೆಟ್ಟಿ ಮತ್ತು ರಂಗಮ್ಮ ಎಂಬುವವರ ಪುತ್ರ ಕೃಷ್ಣ ಶೆಟ್ಟಿ ಅವರು ತಲೆತಲಾಂತರಗಳಿಂದ ತಮ್ಮ ಜೀವನಕ್ಕೆ ವ್ಯವಸಾಯವನ್ನೇ ಪ್ರಧಾನವಾಗಿಸಿಕೊಂಡು ಬಂದಿದ್ದಾರೆ. ಸುಮಾರು 5 ಎಕರೆ ಜಮೀನಿನಲ್ಲಿ ಹಿಂದಿನಿಂದಲೂ ರಾಸಾಯನಿಕಗಳನ್ನು ಬಳಸಿಕೊಂಡು ವ್ಯವಸಾಯ ಮಾಡುತ್ತಿದ್ದರು. ಕೆಲವು ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಹಾಗೂ ಸಾವಯವ ಕೃಷಿಕ, ರೈತ ಮುಖಂಡ ಬಂದಿಗೌಡನಹಳ್ಳಿ ನಟರಾಜ್ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿಗೆ ಹೊರಳಿದ್ದಾರೆ.
ಪ್ರಸ್ತುತ ಕೃಷ್ಣ ಶೆಟ್ಟಿ ಅವರು ತಮ್ಮ ಜಮೀನಿನಲ್ಲಿ ತೆಂಗು, ಅಡಕೆ, ಬಾಳೆ, ಅರಿಶಿಣ, ತರಕಾರಿ ಮತ್ತು ತರಕಾರಿ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಸುಮಾರು ಅರ್ಧ ಎಕರೆ ಜಮೀನಿನಲ್ಲಿ 300 ಅಡಿಕೆ ಸಸಿಗಳನ್ನು ನೆಟ್ಟಿದ್ದಾರೆ. ಸಂಪೂರ್ಣವಾಗಿ ಸಾವಯವ ಗೊಬ್ಬರವನ್ನು ನಿರಂತರವಾಗಿ ನೀಡುತ್ತ ಗಿಡಗಳನ್ನು ಪೋಷಣೆ ಮಾಡುತ್ತಿದ್ದಾರೆ. ಅದಲ್ಲದೇ ಹೈನುಗಾರಿಕೆಯಲ್ಲೂ ಆಸಕ್ತಿ ವಹಿಸಿರುವ ಅವರು ಸುಮಾರು ನಾಲ್ಕು ಹಸುಗಳನ್ನು ಸಾಕಿದ್ದಾರೆ. ಜತೆಯಲ್ಲಿ ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ರಾಸಾಯನಿಕಯುಕ್ತ ಕೃಷಿಯಿಂದ ಹೊರಬಂದು ಹಂತ ಹಂತವಾಗಿ ಸಾವಯವ ಕೃಷಿ ಮಾಡುತ್ತಿರುವ ಕೃಷ್ಣ ಶೆಟ್ಟಿ ಅವರು ಬೇಸಾಯದಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ವರ್ಷಕ್ಕೆ 2-3 ಲಕ್ಷ ರೂ. ಲಾಭ ಕಾಣುತ್ತಿರುವ ಕೃಷ್ಣ ಶೆಟ್ಟಿ ಅವರು ಸಾವಯವ ಕೃಷಿ ಉತ್ತಮ ಇಳುವರಿಯ ಜತೆಗೆ ದುಪ್ಪಟ್ಟು ಆದಾಯವನ್ನು ತಂದುಕೊಡುತ್ತಿದೆ ಎಂದು ಹೇಳುತ್ತಾರೆ.
ಜೀವಾಮೃತ ಬಳಕೆ:
ಸಾವಯವ ಕೃಷಿಕ ಕೃಷ್ಣ ಶೆಟ್ಟಿ ಅವರು ನಿರಂತರವಾಗಿ ತಾವು ಬೆಳೆದ ಬೆಳೆಗಳಿಗೆ ಜೀವಾಮೃತ ನೀಡುತ್ತಿದ್ದಾರೆ. ಸಾವಯವ ಕೃಷಿಕ ಬಂದಿಗೌಡನಹಳ್ಳಿ ನಟರಾಜ್ ಅವರು ಕೃಷ್ಣ ಶೆಟ್ಟಿ ಅವರಿಗೆ ಕೃಷಿ ಮತ್ತು ರೇಷ್ಮೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಸಾವಯವ ಕೃಷಿ, ಜೀವಾಮೃತ ಬಳಕೆ ಬಗ್ಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅದರಂತೆ ಜೀವಾಮೃತ ಬಳಕೆಯಿಂದ ಜಮೀನಿನಲ್ಲಿ ಸುಮಾರು 300 ಅಡಕೆ ಸಸಿಗಳು ಹಾಗೂ ಮುಸುಕಿನ ಜೋಳ ನಳನಳಿಸುತ್ತಿದೆ. ಇತ್ತೀಚೆಗೆ ಬೆಳೆದಿರುವ ಸಬಸಿಗ, ಮೆಂತೆ, ಪಾಲಾಕ್ ಹಾಗೂ ಇನ್ನಿತರೆ ತರಕಾರಿ ಸೊಪ್ಪು ಸಾವಯವ ಬೇಸಾಯದಿಂದ ಸೊಂಪಾಗಿ ಬೆಳೆದಿದೆ. ತೆಂಗಿನಲ್ಲೂ ಕೂಡ ಇತ್ತೀಚೆಗೆ ಉತ್ತಮ ಇಳುವರಿ ಬರುತ್ತಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ರಾಸಾಯನಿಕ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಸಾವಯವದಲ್ಲೇ ಸಂಪೂರ್ಣವಾಗಿ ಕೃಷಿ ಮಾಡಲು ಕೃಷ್ಣ ಶೆಟ್ಟಿ ಅವರು ಮುಂದಾಗಿದ್ದಾರೆ.
ಹಸುವಿನ ಗೊಬ್ಬರವೇ ಆಧಾರ:
ತಮ್ಮ ಜಮೀನಿನಲ್ಲೇ ಮನೆ ನಿರ್ಮಾಣ ಮಾಡಿಕೊಂಡು ಅಲ್ಲೇ ವಾಸವಾಗಿರುವ ಕೃಷಿಕ ಕೃಷ್ಣಶೆಟ್ಟಿ ಅವರು ಹಸುವಿನ ಗೊಬ್ಬರವನ್ನೇ ಆಧಾರವಾಗಿಸಿಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಒಂದು ಹೊಂಡವನ್ನು ಮಾಡಿ ಸುಮಾರು ಒಂದು ವರ್ಷಗಳ ಕಾಲ ಗೊಬ್ಬರವನ್ನು ಶೇಖರಣೆ ಮಾಡುತ್ತಾರೆ. ಬಳಿಕ ವರ್ಷದ ನಂತರ ಬೆಳೆಗಳಿಗೆ ಹಾಗೂ ಉಳುಮೆ ಮಾಡುವ ಮುನ್ನಾ ಜಮೀನಿಗೆ ಹರಡುತ್ತಾರೆ. ಇದರಿಂದಾಗಿಯೇ ಉತ್ತಮವಾಗಿ ಬೆಳೆ ಇಳುವರಿ ಬರುತ್ತಿದೆ ಎನ್ನುತ್ತಾರೆ. ರೇಷ್ಮೆ ಬೆಳೆಯಲು ಜಮೀನಿನಲ್ಲೇ ಸುಸಜ್ಜಿತವಾದ ಶೆಡ್ ನಿರ್ಮಾಣ ಮಾಡಿದ್ದಾರೆ. ಹಿಪ್ಪು ನೇರಳೆ ಸೊಪ್ಪನ್ನು ಸಾವಯವದಲ್ಲೇ ಬೆಳೆದಿದ್ದು ಸೊಂಪಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬೇಸಾಯದಲ್ಲಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಕೃಷ್ಣಶೆಟ್ಟಿ ಅವರು ಬೇಸಾಯದಲ್ಲಿ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಸಾವಯವ ಕೃಷಿಯತ್ತಾ ಇತರರು ಮುಖಮಾಡುವಂತೆ ಸಲಹೆ ನೀಡುತ್ತಾರೆ.
ರೋಗ ಮುಕ್ತ ಜೀವನ ನಡೆಸಲು ಸಾವಯವ ಕೃಷಿ ಮಾಡುವುದು ಇಂದಿನ ಅಗತ್ಯವಾಗಿದೆ. ರಾಸಾಯನಿಕ ಬಳಕೆ ಮಾಡುವುದರಿಂದ ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ. ನಮ್ಮ ಸರ್ಕಾರಗಳು ಕೂಡ ಸಾವಯವ ಕೃಷಿ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ಕುರಿತು ರೈತರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಸಾವಯವದಿಂದ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ನೀಡಬೇಕು.-ಕೃಷ್ಣಶೆಟ್ಟಿ, ಸಾವಯವ ಕೃಷಿಕ, ಕಾಣೀಕೆರೆ, ಚಾಮರಾಜನಗರ.