

ಚಾಮರಾಜನಗರ: ಮಾರ್ಗದರ್ಶಿ ವಿಕಲಚೇತನರ ಮಕ್ಕಳ ಸೇವಾ ಸಂಸ್ಥೆಯಿಂದ ಮಾ.4ರಂದು ನಗರದಲ್ಲಿ ಅಂಗವಿಕಲ ಮಕ್ಕಳ ವಿಶೇಷ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಯೋಜಕಿ ಲೀನಾಕುಮಾರಿ ತಿಳಿಸಿದರು.
ಅಂದು ನಗರದ ರಾಮಸಮುದ್ರದ ಸಂತ ಫ್ರಾನ್ಸಿಸ್ ಶಾಲಾ ಆವರಣದಲ್ಲಿ ಬೆಳಗ್ಗೆ 9ರಿಂದ 4 ಗಂಟೆವರೆಗೆ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಅಂಗವಿಕಲರು, ಆರೈಕೆದಾರರು, ಪಾಲಕರು ಭಾಗವಹಿಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಅಂಗವಿಕಲ ಮಗು ಹುಟ್ಟಿದ ತಕ್ಷಣ ಪಾಲಕರು ಚಿಕಿತ್ಸೆಗಾಗಿ ಖರ್ಚು ಮಾಡಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಜತೆಗೆ ಸಾಕಷ್ಟು ಕೌಟುಂಬಿಕ ಕಲಹಗಳು ಸಹ ನಡೆದಿರುತ್ತದೆ. ಇಂತಹ ಸಂದರ್ಭದಲ್ಲಿ ಅಂಗವಿಕಲ ಮಕ್ಕಳನ್ನು ಜಾತ್ರೆಗೆ ಕರೆದುಕೊಂಡು ಬರುವುದು ತೀರಾ ಕಡಿಮೆ. ಇದನ್ನು ಮನಗಂಡ ಮಾರ್ಗದರ್ಶಿ ಸಂಸ್ಥೆಯು 2019ರಲ್ಲಿ ಚಾಮರಾಜನಗರ ಪಟ್ಟಣದಲ್ಲಿ ಅಂಗವಿಕಲ ಮಕ್ಕಳಿಗೆ ಮತ್ತು ಆರೈಕೆದಾರರಿಗೆ ವಿಶೇಷ ಜಾತ್ರೆ ಕಾರ್ಯಕ್ರಮವನ್ನು ಸಂಘ ಸಂಸ್ಥೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗಿತ್ತು ಎಂದರು.
ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ಮಾರ್ಗದರ್ಶಿ ವಿಕಲಚೇತನರ ಸ್ವಯಂಸೇವಾ ಸಂಸ್ಥೆ ನಮ್ಮ ಜಿಲ್ಲೆಯಲ್ಲಿ ವಿಕಲಚೇತನ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ. ಅದೇ ರೀತಿ ಅಂಗವಿಕಲ ಮಕ್ಕಳ ವಿಶೇಷ ಜಾತ್ರೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಇತರ ಸಂಘ ಸಂಸ್ಥೆಗಳ ಜತೆ ಗೂಡಿ, ಆಟದ ಸಾಮಗ್ರಿ, ಐಸ್ ಕ್ರೀಂ, ಜ್ಯೂಸ್, ಕಬ್ಬಿನ ಹಾಲು ಸೇರಿದಂತೆ ತಿಂಡಿ ತಿನಿಸುಗಳನ್ನು ವ್ಯವಸ್ಥೆ ಮಾಡುತ್ತಿವೆ ಎಂದು ತಿಳಿಸಿದರು. ತಾಲೂಕು ಸಂಯೋಜಕಿ ಕೋಮಲ, ಮಾರ್ಗದರ್ಶಕಿ ಕವಿತಾ ಇದ್ದರು.