

ಚಾಮರಾಜನಗರ: ರಾಜ್ಯ ಸರ್ಕಾರ ಕಳೆದ 9 ತಿಂಗಳಿನಿಂದಲೂ ಹಾಲು ಉತ್ಪಾದಕ ರೈತರಿಗೆ ಹಾಲಿನ ಪೋತ್ಸಾಹ ಧನ ನೀಡದಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ನೂತನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಜೋಡಿರಸ್ತೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನಾ ಕಾಂಗ್ರೆಸ್ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ 7 ರೂ.ಪೋತ್ಸಾಹಧನ ನೀಡುವುದಾಗಿ ೋಷಣೆ ಮಾಡಿತ್ತು. ಆದರೆ ಕಳೆದ 9 ತಿಂಗಳುಗಳಿಂದ ರೈತರಿಗೆ ಯಾವುದೇ ಪ್ರೋತ್ಸಾಹ ಧನ ನೀಡದೆ ವಂಚನೆ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ 5 ರೂ. ಅನ್ನು ನೀಡಿಲ್ಲ. ಈ ಮೂಲಕ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ದೂರಿದರು.
ರೈತರು ಬರ ಪರಿಸ್ಥಿತಿಯಲ್ಲಿ ಕಂಗೆಟ್ಟಿದ್ದು ಜಾನುವಾರುಗಳಿಗೆ ಮೇವು ಇಲ್ಲದೆ ಪರಿತಪಿಸುತ್ತಿದ್ದಾರೆ. ಪ್ರತಿ ದಿನ ಹಾಲು ನೀಡುವ ಹಸುಗಳಿಗೆ ಆಹಾರ, ಮೆವು ಖರೀರಿಸಲು ಹಣ ಇಲ್ಲದೆ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಎಲ್ಲರಿಗೂ ಉಚಿತ ಎಂದು ಹೇಳಿ ಶೇ.40 ರಷ್ಟು ಜನರನ್ನು ತಲುಪಲು ವಿಫಲವಾಗಿದ್ದಾರೆ. ರೈತರ ಪೋತ್ಸಾಹಧನ ಕಡಿತಗೊಳಿಸಿ ರೈತ ವಿರೋಧಿ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಕೂಡು ಪ್ರಕಾಶ್, ಮಾಜಿ ಅಧ್ಯಕ್ಷ ಆರ್.ಸುಂದರ್, ನಗರಸಭಾ ಸದಸ್ಯ ಶಿವರಾಜ್, ಚಂದ್ರಶೇಖರ್, ಯುವ ಮೋರ್ಚಾ ಉಪಾಧ್ಯಕ್ಷ ಶಿವುವಿರಾಟ್, ಪ್ರಧಾನ ಕಾರ್ಯದರ್ಶಿ ಸೂರ್ಯಬಾಲರಾಜ್, ಕೂಸಣ್ಣ, ಕಾಡಹಳ್ಳಿ ಮಹೇಶ್, ಅರಕಲವಾಡಿಮಹೇಶ್, ರಾಜು, ಮಹದೇವಸ್ವಾಮಿ, ನಟರಾಜು, ನಲ್ಲೂರುಪರಮೇಶ್, ವೇಣುಗೋಪಾಲ್, ಚಂದ್ರು, ಬಾನುಪ್ರಕಾಶ್, ಶಿವರುದ್ರ, ಮಹೇಂದ್ರ, ಉತ್ತುವಳ್ಳಿ ಮಹೇಶ್, ಚಂದ್ರಶೇಖರ್, ಮಹದೇವಪ್ಪ, ಆನಂದ್ ಮಾದಪ್ಪ, ಮಹದೇವಶೆಟ್ಟಿ, ಮಹೇಶ್ ಪಟೇಲ್ ಹಾಗೂ ಇತರರು ಭಾಗವಹಿಸಿದ್ದರು.