ಆಷಾಢ ಮಾಸದ ರಥೋತ್ಸವಕ್ಕೆ ಸಿದ್ಧತೆ

008
Published on

ಚಾಮರಾಜನಗರ:ಆಷಾಢಮಾಸ ಅಶುಭಮಾಸ ಎಂಬುದು ಜನರ ನಂಬಿಕೆ, ಆದರೆ ವಿಶೇಷ ಎಂಬಂತೆ ಈ ಮಾಸದಲ್ಲೇ ಜರುಗುವ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ಮಹಾ ರಥೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ನಗರದ ಹೃದಯಭಾಗದಲ್ಲಿರುವ ಶ್ರೀಚಾಮರಾಜೇಶ್ವರಸ್ವಾಮಿ, ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ಸ್ವಾಮಿ ಮಹಾರಥೋತ್ಸವ ಜು.6 ರಂದು ನಡೆಯಲಿದ್ದು, ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು. ಜೂ.26 ರಿಂದವಿಶೇಷ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವ ವಿಶೇಷವಾಗಿ ಆಷಾಢ ತಿಂಗಳಲ್ಲಿ ನಡೆಯಲಿದ್ದು ಜಿಲ್ಲೆಯ ಭಕ್ತರು ಮಾತ್ರವಲ್ಲದೆ, ಹೊರಗಿನ ಸಹಸ್ರಾರು ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ.

ಅದರಲ್ಲೂ ನವ ವಿವಾಹಿತರು ರಥೋತ್ಸವದಲ್ಲಿ ಭಾಗವಹಿಸಿ ರಥಕ್ಕೆ ಹಣ್ಣು, ಜವಣ ಎಸೆದು ಪ್ರಾರ್ಥಿಸುವುದು ವಿಶೇಷವಾಗಿದೆ. ಇದೀಗ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಜು.26 ರಂದು ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಚಾಲನೆ ದೊರೆಯಲಿದ್ದು, ಪ್ರತಿದಿನವೂ ರಥದ ಬೀದಿಯಲ್ಲಿ ಮುಂಜಾನೆ ಹಾಗೂ ಸಂಜೆಯ ಸಮಯದಲ್ಲಿ ಉತ್ಸವ ನಡೆಯಲಿದೆ. ನಿತ್ಯವೂ ರಥ ಸಾಗುವ ಬೀದಿಯಲ್ಲಿ ಬಲಿ ಪ್ರಧಾನ ನಡೆಯಲಿದ್ದು, ನೂತನ ರಥಕ್ಕೆ ಹಗ್ಗ ಕಟ್ಟುವ ಹಾಗೂ ಬಣ್ಣ ಬಣ್ಣದ ಧ್ವಜ ಕಟ್ಟುವ ಕಾರ್ಯ ನಡೆಯುತ್ತಿದೆ. ಒಟ್ಟಾರೆಯಾಗಿ ಈ ಬಾರಿ ಆಷಾಢದ ಶ್ರೀ ಚಾಮರಾಜೇಶ್ವರ ರಥೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ರಥೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಆಷಾಢ ಮಾಸದಲ್ಲಿ ರಥೋತ್ಸವ:
ಸಾಮಾನ್ಯವಾಗಿ ಆಷಾಢಮಾಸವನ್ನು ಮೂಲಮಾಸವೆಂದು, ಶುಭ ಕಾರ್ಯಗಳು ನಡೆಯುವುದಿಲ್ಲವೆಂದು ಹೇಳುತ್ತಾರೆ. ಇದಕ್ಕೆ ಅಪವಾದವೆಂಬಂತೆ, ಈ ಮಾಸದಲ್ಲೇ ಇಲ್ಲಿ ರಥೋತ್ಸವ ನಡೆಯುತ್ತದೆ. ಆಷಾಢಮಾಸದ ಪೂರ್ವಾಷಾಢ ನಕ್ಷತ್ರದಲ್ಲಿ ಹುಣ್ಣಿಮೆಯಂದು ನಡೆಯುತ್ತದೆ. ಈ ರಥಕ್ಕೆ ಹೊಸದಾಗಿ ಮದುವೆಯಾದ ದಂಪತಿಗಳು ಹಣ್ಣು ಜವನವನ್ನು ಎಸೆದು ಪುತ್ರ ಸಂತಾನವಾಗುವುದೆಂದು, ಸುಖ, ಸಂತೋಷ, ಸಹಬಾಳ್ವೆ, ಮುಕ್ತಿ ದೊರೆಯುವುದೆಂದು ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ಈ ರಥೋತ್ಸವದಲ್ಲಿ ನವ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಧಾರ್ಮಿಕ ಕಾರ್ಯಕ್ರಮ ಶುರು:
ಶ್ರೀಚಾಮರಾಜೇಶ್ವರ ರಥೋತ್ಸವದ ಅಂಗವಾಗಿ ಸೋಮವಾರ ಮೃತ್ತಿಕಾ ಸಂಗ್ರಹಣಾ, ಚೆಂಡಿಕೇಶ್ವರ ಮತ್ತು ಗಣಪತಿ ಉತ್ಸವ ಮಾಡುವ ಮೂಲಕ ಧಾರ್ಮಿಕ ಪೂಜಾ ಕೈಕಂರ್ಯಗಳಿಗೆ ಚಾಲನೆ ನೀಡಲಾಗುತ್ತದೆ.ಅಂಕುಣಾರ್ಪಣ, ಧ್ವಜಾರೋಹಣ ಹಾಗೂ 10 ದಿನಗಳ ಕಾಲವೂ ರಾತ್ರಿಯ ವೇಳೆಯಲ್ಲಿ ಚಿಕ್ಕ ರಥೋತ್ಸವ ನಡೆಯಲಿದೆ. ಜು.6 ರಂದು ಬ್ರಹ್ಮ ರಥೋತ್ಸವ ಜರುಗಳಿದೆ. ದೇವಾಲಯದಲ್ಲಿ ಮುಕ್ಕಾಗಿದ್ದ 18 ವಿಗ್ರಹಗಳನ್ನು ಸ್ಥಳೀಯರ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದ್ದು, ಎಲ್ಲಾ ದೇವರಿಗೂ ಈಗ ಪೂಜೆ ನೆರವೇರಿಸಲಾಗುತ್ತಿದೆ ಎಂದು ದೇವಾಲಯದ ಅರ್ಚಕರಾದ ರಾಮಕೃಷ್ಣ ಭಾರದ್ವಾಜ್ ವಿಜಯವಾಣಿಗೆ ಮಾಹಿತಿ ನೀಡಿದರು.

ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ:ಹಿಂದಿನ ವರ್ಷ ಜರುಗಿದ ಶ್ರೀ ಚಾಮರಾಜೇಶ್ವರ ಬ್ರಹ್ಮ ರಥೋತ್ಸವದಲ್ಲಿ 1 ಲಕ್ಷಕ್ಕಿಂತಲೂ ಅಧಿಕ ಮಂದಿ ಭಾಗವಹಿಸಿದ್ದರು. ಈ ಬಾರಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ, ಉಚಿತ ಬಸ್ ಸೌಲಭ್ಯ ಇರುವುದರಿಂದ ಹಿಂದಿನ ವರ್ಷಕ್ಕಿಂತಲೂ,ಈ ಬಾರಿ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ದೇವಾಲಯದಲ್ಲಿ ಆಷಾಢ ಶುಕ್ರವಾರದಲ್ಲೇ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು. ಆಷಾಢಮಾಸದಲ್ಲಿ ನಡೆಯುವ ಏಕೈಕ ರಥೋತ್ಸವ ಇದಾಗಿರುವುದರಿಂದ, ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವರು ಎಂದು ಹೇಳಲಾಗುತ್ತಿದೆ.

ಈ ಬಾರಿಯ ರಥೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ನವ ಜೋಡಿ ಗಳು ಉತ್ಸಾಹದಿಂದಕಾಯುತ್ತಿದ್ದಾರೆ. ಜೂ.26 ರಿಂದ ಜು.6 ರವರೆಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದ್ದು,ಹಿಂದಿನ ವರ್ಷಕ್ಕಿಂತಲೂ, ಬ್ರಹ್ಮ ರಥೋತ್ಸವದಲ್ಲಿ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ.-ರಾಮಕೃಷ್ಣ ಭಾರದ್ವಾಜ್, ಅರ್ಚಕ, ಶ್ರೀಚಾಮರಾಜೇಶ್ವರ ದೇವಾಲಯ, ಚಾಮರಾಜನಗರ.

ಪ್ರತಿ ಹುಣ್ಣಿಮೆಗೂ ಈಗ ವಿಶೇಷ ಪೂಜೆ, ರಥೋತ್ಸವ ಮಾಡಲಾಗುತ್ತಿದೆ. 6 ವರ್ಷಗಳಿಂದ ಅದು ನಿಂತುಹೋಗಿತ್ತು. ಈಗ ಅದು ಸುಸೂತ್ರವಾಗಿ ನಡೆದುಕೊಂಡು ಬರುತ್ತಿದೆ. ವಿಗ್ರಹಗಳ ಜೀಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ ಯಾವುದೇ ಅನುದಾನ ನೀಡಿಲ್ಲ. ಬ್ರಹ್ಮ ರಥದ ಜತೆಗೆ, ಮತ್ತೆರೆಡು ಚಿಕ್ಕ ರಥಗಳು ಸಿದ್ದವಾಗಬೇಕಿದೆ. ಈ ಬಾರಿಯ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.-ಮಹೇಶ್ ಕುದರ್, ಮುಖಂಡ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net