ಭಗೀರಥರು ದೃಢಸಂಕಲ್ಪದ ಪ್ರತೀಕ

25raju4
Published on

ಚಾಮರಾಜನಗರ: ಭಗೀರಥ ಮಹರ್ಷಿಗಳು ಛಲ, ದೃಢಸಂಕಲ್ಪದ ಪ್ರತೀಕ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಜಿಲ್ಲಾ ಉಪ್ಪಾರ ಯುವಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀಭಗೀರಥ ಜಯಂತ್ಯುತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಗೀರಥ ಮಹರ್ಷಿಗಳು ಕಠಿಣ ತಪಸ್ಸು ಮಾಡುವ ಮೂಲಕ ಧರೆಗೆ ಗಂಗೆಯನ್ನು ತಂದರು. ಅಂತಹ ಭಗೀರಥರ ಉಪ್ಪಾರ ಸಮುದಾಯ ಪ್ರಸ್ತುತ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಸದ್ಯ ಉಪ್ಪಾರ ಸಮಾಜಕ್ಕೆ ಶಿಕ್ಷಣವೇ ಆಸ್ತಿಯಾಗಿರುವುದರಿಂದ ಸಮುದಾಯದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರಲ್ಲದೆ, ವೃತ್ತ ನಿರೀಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ.ಎಂ.ಮಹದೇವಶೆಟ್ಟರ ನಿವೃತ್ತಿ ಜೀವನ ಸುಖಕರವಾಗಿರಲಿ ಹಾರೈಸಿದರು. ಜಿಲ್ಲಾ ಉಪ್ಪಾರ ಯುವಕರ ಸಂಘದ ಸಮಾಜಮುಖಿ ಕಾರ್ಯಕ್ಕೆ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಂ.ಮಹದೇವಶೆಟ್ಟಿ ಮಾತನಾಡಿ, ಜಿಲ್ಲಾ ಭಗೀರಥ ಯುವಕರ ಸಂಘ ತಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ತುಂಬ ಖುಷಿ ತಂದಿದೆ. ಸಮಾಜದ ನೌಕರರು ಸಮುದಾಯದ ಅಭಿವೃದ್ಧಿ ಕಡೆಗೂ ಗಮನ ಹರಿಸುವುದು ಅಗತ್ಯ ಎಂದರು.
ಜಿಲ್ಲಾ ಉಪ್ಪಾರ ಯುವಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಟಿಐ ಕಾಲೇಜು ಪ್ರಾಂಶುಪಾಲ ಟಿ.ಎಂ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಪ್ರಾಂಶುಪಾಲ ಎಂ.ಸೋಮಣ್ಣ, ಹರದನಹಳ್ಳಿ ಉಪ್ಪಾರ ಜನಾಂಗದ ಗಡಿಮನೆ ಯಜಮಾನ ಜಯಸ್ವಾಮಿ, ಬಾಲ ಕಾರ್ಮಿಕ ಇಲಾಖೆ ನೌಕರ ಮಹೇಶ್, ಪೊಲೀಸ್ ಮಂಜುನಾಥ್, ರಾಜು, ಕೆಸ್ತೂರು ಜಿಲ್ಲಾ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜು, ಹೋರಾಟಗಾರ ಸಿದ್ದಶೆಟ್ಟಿ, ಶಿವಕುಮಾರ್, ಜಯಸಿದ್ದು, ಹೂವಿನ ಸೋಮು, ಮಹೇಂದ್ರ, ಚಂದ್ರು, ಮಂಜುನಾಥ್, ಶಂಕರರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net