

ಕೊಳ್ಳೇಗಾಲ: ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ…ರೋಡ್ ರೋಮಿಯೋಗಳ ಹೆಡೆಮುರಿ ಕಟ್ಟಿ… ಸ್ಮಶಾನಕ್ಕೆ ಹೋಗಲು ರಸ್ತೆ ಮಾಡಿಕೊಡಿ…ವೈನ್‌ಶಾಪ್‌ಗಳನ್ನು ತೆರವು ಮಾಡಿ…
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಿವೈಎಸ್‌ಪಿ ಜಿ.ಯು.ಸೋಮೇಗೌಡ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಕೊಳ್ಳೇಗಾಲ, ಯಳಂದೂರು, ಹನೂರು ತಾಲೂಕುಗಳ ಉಪವಿಭಾಗ ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಸಮಸ್ಯೆಗಳು ಅನಾವರಣಗೊಂಡವು.
ರಾಜ್ಯ ಛಲವಾದಿ ಮಹಾಸಭಾ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆ ಮಹತ್ವವಾದದ್ದು, ಆದರೆ, ಕಾಟಾಚಾರಕ್ಕೆ ನಡೆಸಲಾಗುತ್ತಿದೆ. 3 ತಿಂಗಳಿಗೊಮ್ಮೆ ಆಯೋಜಿಸಬೇಕಾದ ಸಭೆ 6, 9 ತಿಂಗಳಾದರೂ ನಡೆಯುವುದಿಲ್ಲ. ಲೋಕಸಭೆ ಹಾಗೂ ವಿಧಾನಸಭೆ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದೆ. ಇಲ್ಲಿ ಸಾಕಷ್ಟು ಸಮಸ್ಯೆ ಇದೆ. ಎಸ್ಸಿ-ಎಸ್ಟಿಗಳ ಮೇಲೆ ದೌರ್ಜನ್ಯವು ಹೆಚ್ಚಿದೆ. ಮೂರು ತಾಲೂಕು ಎಸ್ಸಿ-ಎಸ್ಟಿಗಳ ಸಭೆ ಕರೆದು 50 ಜನ ಬಂದರೆ ಏನು ಪ್ರಯೋಜನ, ಮುಂದೆ ವ್ಯಾಪಕವಾಗಿ ಪ್ರಚಾರ ಮಾಡಿ ನಿಗದಿತ ಅವಧಿಯಲ್ಲಿ ಸಭೆ ನಡೆಸಬೇಕು ಎಂದು ಹೇಳಿದರು.
ವೈನ್‌ಶಾಪ್ ತೆರವಿಗೆ ಆಗ್ರಹ:
ಪಟ್ಟಣ ಪೊಲೀಸ್ ಠಾಣೆ ಪಕ್ಕದಲ್ಲೆ ವೈನ್‌ಶಾಪ್‌ಇದೆ. 100 ಮೀಟರ್ ಒಳಗೆ ಶಾಲೆಗಳು, ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿವೆ. ಈಗಿರುವಾಗ ವೈನ್‌ಶಾಪ್‌ಗೆ ಹೇಗೆ ಅವಕಾಶ ಸಿಕ್ಕಿದೆ. ಪ್ರತಿ ಸಭೆಯಲ್ಲೂ ಈ ಬಗ್ಗೆ ದೂರು ನೀಡಿದರೂ ಅಬಕಾರಿ ಇಲಾಖೆ ಕ್ರಮ ವಹಿಸುತ್ತಿಲ್ಲ. ಪದೇ ಪದೆ ದೂರಿದರೂ ಪ್ರಯೋಜನವಾಗಿಲ್ಲ. ಹೀಗಿರುವಾಗ ಸಭೆ ಏಕೆ ಮಾಡಬೇಕು. ಇನ್ನು ಪಟ್ಟಣದ ಶಾಲಾ-ಕಾಲೇಜು ಬಿಡುವ ಸಂದರ್ಭದಲ್ಲಿ ರೋಡ್ ರೋಮಿಯೋಗಳ ಕಾಟ ಹೆಚ್ಚಿದೆ. ಬೈಕ್‌ಗಳಲ್ಲಿ ಬರುವ ಪುಂಡರು ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದಾರೆ. ಇದು ಮುಂದುವರಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ನಟರಾಜ್ ಮಾಳಿಗೆ ಎಚ್ಚರಿಸಿದರು. ಯಳಂದೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಎದುರಿನ ಬಾರ್ ತೆರವಿಗೆ ನಿವಾಸಿ ಚಂದ್ರಶೇಖರ್ ಆಗ್ರಹಿಸಿದರು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಎಗ್ಗಿಲ್ಲದೆ ಮದ್ಯ ಅಕ್ರಮ ಮಾರಾಟ ಮಾಡಲಾಗುತ್ತಿದೆ. ಎಸ್ಸಿ-ಎಸ್ಟಿ ಕಾಲನಿಯಲ್ಲೇ ಹೆಚ್ಚಿದೆ. ಎಲ್ಲರೂ ಕುಡಿದು ಹಾಳಾಗುತ್ತಿದ್ದಾರೆ. ಕೌಟುಂಬಿಕ ಕಲಹಗಳಿಗೆ ದಾರಿಯಾಗಿದೆ. ಮದ್ಯ ಮಾರುವವರ ಮೇಲೆ ಕ್ರಮ ವಹಿಸುವ ಪೊಲೀಸ್ ಇಲಾಖೆ, ಸರಬರಾಜು ಮಾಡುವವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ದಶರಥ್ ಅನುಮಾನ ವ್ಯಕ್ತಪಡಿಸಿದರು.
ಪಟ್ಟಣದ ಆನಂದ ಜ್ಯೋತಿ ಕಾಲನಿ ನಿವಾಸಿ ಬಾಲರಾಜ್ ಮಾತನಾಡಿ, ಮೂರೂ ತಾಲೂಕು ವ್ಯಾಪ್ತಿಯ ಸಭೆ ಇದಾಗಿದೆ. ಆದರೆ, ಆದಿಜಾಂಬವ ಸಮಾಜದವರಿಗೆ ಮಾಹಿತಿ ಇಲ್ಲ. 5 ಜನರು ಮಾತ್ರ ಬಂದಿದ್ದೇವೆ. ಈ ತಾರತಮ್ಯ ಏಕೆ ಎಂದು ಅಸಮಾಧಾನ ಹೊರಹಾಕಿದರು.
ಪಾಳ್ಯದ ಶಿವರಾಜ್ ನಾಯ್ಕ ಮಾತನಾಡಿ, ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲ. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದರು. ಸರಗೂರು ಗ್ರಾಮದ ಶಿವಶಂಕರ್ ಮಾತನಾಡಿ, ಸರಗೂರಿನಲ್ಲಿ ಎಸ್ಸಿ ಜನರಿಗೆ ಸೇರಿದ ಸ್ಮಶಾನಕ್ಕೆ ರಸ್ತೆಯಿಲ್ಲ. ಕಾಲನಿಯಲ್ಲಿ ವಿದ್ಯುತ್ ವ್ಯವಸ್ಥೆಯಿಲ್ಲ ಎಂದು ದೂರಿದರು.
ಡಿವೈಎಸ್ಪಿ ಜಿ.ಯು ಸೋಮೇಗೌಡ ಮಾತನಾಡಿ, ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುತ್ತೇವೆ. ಪಟ್ಟಣ ಠಾಣೆ ಪಕ್ಕದಲ್ಲಿರುವ ವೈನ್‌ಶಾಪ್ ಹಾಗೂ ಯಳಂದೂರು ಅಂಬೇಡ್ಕರ್ ಸಮುದಾಯ ಭವನ ಎದುರಿರುವ ಬಾರ್ ತೆರವಿಗೆ ಅಬಕಾರಿ ಇಲಾಖೆ ಪತ್ರ ಬರೆಯುತ್ತೇವೆ. ಮುಂದೆ ಸಕಾಲಕ್ಕೆ ಸಭೆ ಕರೆಯುತ್ತೇವೆ. ಸಭೆಯಲ್ಲಿ ಬಂದ ಎಲ್ಲ ದೂರುಗಳ ಬಗ್ಗೆ ಕ್ರಮವಹಿಸಲಾಗುವುದು ಎಂದರು. ಸಿಪಿಐ ಕೃಷ್ಣಪ್ಪ, ಸಂತೋಷ್ ಕಶ್ಯಪ್, ನಂಜುಂಡಸ್ವಾಮಿ, ಶಶಿಕಮಾರ್, ಪಿಎಸ್‌ಐ ಮಹೇಶ್ ಇತರರು ಇದ್ದರು.