ಚಿತ್ರಕಲಾ ಸ್ಪರ್ಧೆಯಲ್ಲಿ ಪರಿಸರ ಕಾಳಜಿ ಅನಾವರಣ

24raju8
Published on

ಚಾಮರಾಜನಗರ: ಪ್ರಕೃತಿಯ ಸೊಬಗು, ವಿಕೃತಿಯ ಕರಾಳತೆ ಚಿತ್ರದ ರೂಪ ಪಡೆಯಿತು. ಪರಿಸರ ಸಂರಕ್ಷಣೆಯಿಂದಾಗುವ ಅನುಕೂಲ, ನಾಶದಿಂದಾಗುವ ಅನಾಹುತದ ಸಂದೇಶ ಸಾರಿತು.

ಪರಿಸರ ಜಾಗೃತಿಯ ಉದ್ದೇಶದಿಂದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ತೇಜಸ್ ಸೇವಾ ಸಂಸ್ಥೆ, ಪವನ್ ಸೇವಾ ಟ್ರಸ್ಟ್, ಐಸೆಟ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಇದಕ್ಕೆ ವೇದಿಕೆಯಾಯಿತು.

ಸ್ಪರ್ಧೆಯಲ್ಲಿ ಶಾಲೆಯ 8, 9, 10ನೇ ತರಗತಿಯ ಒಟ್ಟು 62 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ಸಂರಕ್ಷಣೆ, ನಾಶದಿಂದ ಸುತ್ತಮುತ್ತಲಿನ ವಾತಾವರಣದಲ್ಲಾಗುವ ಬದಲಾವಣೆಯನ್ನು ಚಿತ್ರದಲ್ಲಿ ಸೆರೆಹಿಡಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಪ್ರಕೃತಿ ನಾಶದಿಂದ ಬೇರೆ ದೇಶಗಳಲ್ಲಿ ಅನಾಹುತಗಳು ಸಂಭವಿಸಿವೆ ಎಂದರು.

ಕರೊನಾ ಸಂದರ್ಭದಲ್ಲಿ ಪರಿಸರ ರಕ್ಷಣೆ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ಅರಿವಿಗೆ ಬಂದಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಎಲ್ಲ ನಾಗರಿಕರ ಕರ್ತವ್ಯ. ಮನೆ ಮುಂದೆ, ರಸ್ತೆ ಬದಿ ಕಸ ಎಸೆಯದೆ ನಗರಸಭೆ ವಾಹನಗಳಿಗೆ ನೀಡಬೇಕು. ಚಿತ್ರಕಲಾ ಸ್ಪರ್ಧೆಗೆ ಮಾತ್ರ ಮಕ್ಕಳ ಪ್ರತಿಭೆ ಸೀಮಿತಗೊಳ್ಳದೆ ರಾಜ್ಯಮಟ್ಟಕ್ಕೆ ಹೋಗಬೇಕು. ಕಲೆಗಳ ತವರೂರಾಗಿರುವ ಚಾಮರಾಜನಗರ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕೆಂದು ಹೇಳಿದರು.

ನಗರಸಭೆ ಸದಸ್ಯ ಗಾಳೀಪುರ ಮಹೇಶ್ ಮಾತನಾಡಿ, ಮಾನವನ ಸ್ವಹಿತಕ್ಕಾಗಿ ಪರಿಸರ ನಾಶವಾಗುತ್ತಿದೆ. ಪರಿಸರ ಉಳಿವು ಎಲ್ಲರ ಜವಾಬ್ದಾರಿ. ಗಿಡ ಬೆಳೆಸುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಸಿ ಕೊಡಿಸುತ್ತೇನೆ. ಮನೆ ಮುಂದೆ ಗಿಡ ನೆಟ್ಟು ಅದನ್ನು ಬೆಳೆಸಿದವರಿಗೆ ಬಹುಮಾನ ನೀಡುತ್ತೇನೆ ಎಂದು ೋಷಿಸಿದರು.

ಪವನ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿ.ಎನ್.ಸಂಪತ್‌ಕುಮಾರ್ ಮಾತನಾಡಿ, ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳ ಕಲ್ಪನೆ ಹೊರಹೊಮ್ಮಿದೆ. ಪರಿಸರ ರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಉಳಿಯಲಿದೆ ಎಂದರು. ಚಿತ್ರನಟ ಶ್ರೀಸಾಯಿ ಮಂಜು ಪ್ರಾರ್ಥನಾ ಗೀತೆ ಹಾಡಿದರು. ನಾಗವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ನಿರೂಪಣೆ ಮಾಡಿದರು. ಶಾಲೆಯ ಹಿರಿಯ ಶಿಕ್ಷಕಿ ಶೀಲಾರಾಣಿ, ಚಿತ್ರಕಲಾವಿದ ಅನಿಲ್‌ಕುಮಾರ್ ಇತರರು ಇದ್ದರು.

ಮೂವರಿಗೆ ಬಹುಮಾನ
ಸ್ಪರ್ಧೆಯಲ್ಲಿ ಅತ್ಯುತ್ತಮ ಚಿತ್ರ ಬಿಡಿಸಿದ ಮೂವರು ವಿದ್ಯಾರ್ಥಿಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಬಹುಮಾನ ವಿತರಿಸಿದರು.10ನೇ ತರಗತಿ ಎ ವಿಭಾಗದ ವಿದ್ಯಾರ್ಥಿನಿ ಪಿ.ಸಿಂಚನಾ ಪ್ರಥಮ, ಬಿ ವಿಭಾಗದ ನಫೀಜಾ ಬಾನು ದ್ವಿತೀಯ, ಸಿ ವಿಭಾಗದ ಯಮುನಾ ತೃತೀಯ ಬಹುಮಾನ ಪಡೆದರು. ತೇಜಸ್ ಸೇವಾ ಸಂಸ್ಥೆಯ ಅಧ್ಯಕ್ಷ ರವಿತೇಜ್, ಪವನ್ ಸೇವಾ ಸಂಸ್ಥೆಯ ಅಧ್ಯಕ್ಷ ಸಿ.ಎನ್.ಸಂಪತ್‌ಕುಮಾರ್, ಚಿತ್ರ ಕಲಾವಿದ ಲೋಕೇಶ್ ತೀರ್ಪುಗಾರರಾಗಿ ಕೆಲಸ ಮಾಡಿದರು.


ಚಿತ್ರಕಲಾ ಸ್ಪರ್ಧೆ ಮೂಲಕ ನಮ್ಮ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲಾಗಿದೆ. ವಿದ್ಯಾರ್ಥಿಗಳ ಪರವಾಗಿ ವಿಜಯವಾಣಿ ಪತ್ರಿಕೆ ಮತ್ತು ತೇಜಸ್, ಪವನ್ ಸೇವಾ ಸಂಸ್ಥೆ, ಐಸೆಟ್ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ಎಲ್ಲ ವಿದ್ಯಾರ್ಥಿಗಳು ನಿಮ್ಮ ಹೆಸರಿನಲ್ಲಿ ಒಂದೊಂದು ಗಿಡ ನೆಡಿ. ಹಸಿರು ಬೆಳೆಸಿ. ಬಡ ವಿದ್ಯಾರ್ಥಿಗಳು ಓದುತ್ತಿರುವ ನಮ್ಮ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ದಾನಿಗಳು ಸಹಕಾರ ನೀಡಿ.
>ಎಚ್.ಎನ್.ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net