ಹಳ್ಳಿಹಳ್ಳಿಗೆ ಬೌದ್ಧ ಸಂದೇಶ ರಥಯಾತ್ರೆ

23raju5
Published on

ಚಾಮರಾಜನಗರ: ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನದ ಅಂಗವಾಗಿ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಹಳ್ಳಿ ಹಳ್ಳಿಗೆ ಬೌದ್ಧ ಸಂದೇಶ ಸಾರುವ ರಥಯಾತ್ರೆಗೆ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು ಗುರುವಾರ ಚಾಲನೆ ನೀಡಿದರು.


ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿ, ಮೈಸೂರಿನಲ್ಲಿ ಫೆ.26ರಂದು ನಡೆಯುವ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನದ ಅಂಗವಾಗಿ ಎಲ್ಲ ಹಳ್ಳಿಗಳಿಗೂ ಭೀಮ ಸಂದೇಶ, ಬೌದ್ಧ ಸಂದೇಶ, ಬೌದ್ಧ ನೀತಿ, ಬೌದ್ಧ ಸಂಸ್ಕೃತಿ ತಿಳಿಸುವ ಸಲುವಾಗಿ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ಸಮ್ಮೇಳನಕ್ಕೆ ಜಿಲ್ಲೆಯಿಂದ ಸುಮಾರು 5 ಸಾವಿರ ಜನರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶ್ವಸಿಗೊಳಿಸುವಂತೆ ಮನವಿ ಮಾಡಿದರು.


ಭಾರತೀಯ ಬೌದ್ದ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾದ ಯಾಲಕ್ಕೂರು ಮಲ್ಲಿಕ್, ಉಮೇಶ್, ಗುತ್ತಿಗೆದಾರ ಬಸವಣ್ಣ, ರಾಮಬಾಯಿ ಅಂಬೇಡ್ಕರ್ ಫೌಂಡೇಷನ್ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪಾ ಮರಿಸ್ವಾಮಿ, ಉಪಾಧ್ಯಕ್ಷೆ ನಾಗಶಿಲ್ಪ, ಸದಸ್ಯರಾದ ನಾಗಮಣಿ, ಮಂಗಳಮ್ಮ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಸಾಹಿತಿ ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net