

ಚಾಮರಾಜನಗರ:ಬಿಜೆಪಿಯ ಹಿರಿಯ ಮುಖಂಡರು ಚುನಾವಣೆಯ ಸೋಲಿಗೆ ಸಾಂತ್ವನದ ಮಾತುಗಳನ್ನಾಡಿದರೆ, ಕಾರ್ಯಕರ್ತರು ಬಿಜೆಪಿಯ ಹಿನ್ನೆಡೆಯನ್ನು ನೆನೆದು ಸಿಟ್ಟಾದರು.
ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ, ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯು ಬಿಜೆಪಿ ಮುಖಂಡರ ಆತ್ಮವಿಶ್ವಾಸ ತುಂಬುವ ಮಾತುಗಳು, ನಿಷ್ಠಾವಂತ ಕಾರ್ಯಕರ್ತರ ಸಂಕಟ, ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ವಿರುದ್ಧ ವಾಗ್ದಾಳಿ ಹಾಗೂ ಮುಂಬರುವ ಚುನಾವಣೆಗಳನ್ನು ಬಾರತೀಯ ಜನತಾ ಪಾರ್ಟಿ ಗೆಲ್ಲುವ ಸಂಕಲ್ಪಕ್ಕೆ ಸಾಕ್ಷಿಯಾಯಿತು.
ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಡಿ.ವಿ.ಸದಾನಂದಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಚುನಾವಣೆಯಲ್ಲಿ ಹಿನ್ನಡೆಯಾಗಿ, ನೋವಾದ ಕಾರ್ಯಕರ್ತರ ಭಾವನೆಗಳಿಗೆ ಮುಖಂಡರು ಬೆಂಬಲವಾಗಿ ನಿಲ್ಲಬೇಕು. ಆಗಿರುವ ತಪ್ಪುಗಳನ್ನು ತಿದ್ದಬೇಕು. ಪಕ್ಷಕ್ಕೆ ಸೋಲು ಹೊಸತಲ್ಲ, ಅಧಿಕಾರದಲ್ಲಿ ಇದ್ದಾಗ ಉತ್ತಮ ಕೆಲಸ ಮಾಡಿದ್ದೇವೆ. ಬಿಜೆಪಿ ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೇ ಶಾಸಕರಾಗಿದ್ದ ಕಾಲವಿತ್ತು. ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು. ಆದರೆ ಇಂದು ಮನಸ್ಸಿಗೆ ತುಂಬಾ ನೋವಾಗುತ್ತದೆ.ಈ ರೀತಿಯ ದಯಾನೀಯ ಸೋಲು ಬರುತ್ತದೆ ಎಂದು ಭಾವಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಸಂಸ್ಕೃತಿ, ಆಚಾರ, ವಿಚಾರದ ಮೇಲೆ ಬಿಜೆಪಿ ಆಡಳಿತ ನಡೆಸಲು ಅಧಿಕಾರಕ್ಕೆ ಬಂದಿದೆ. ವಿದೇಶಿ ರಾಜನೀತಿಯ ಮೇಲೆ ಅಧಿಕಾರ ನಡೆಸುವುದು ನಮ್ಮ ಜಾಯಮಾನವಲ್ಲ. ಜಗತ್ತಿನ ಸಮಸ್ಯೆಗಳಿಗೆ ಭಾರತ ಪರಿಹಾರ ಕಲ್ಪಿಸುವ ಮಟ್ಟಕ್ಕೆ ನರೇಂದ್ರ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ನಮ್ಮ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವಲ್ಲಿ ವಿಲರಾಗಿದ್ದೇವೆ.
ಈ ಸೋಲಿನಿಂದ ಬಿಜೆಪಿಯ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ, ನಿಮ್ಮ ಸಂಕಟಗಳಿಗೆ ನಾನು ಉತ್ತರ ನೀಡುತ್ತೇನೆ. ನನ್ನಿಂದ ಸಾಧ್ಯವಾಗದೇ ಇದ್ದರೆ, ರಾಜ್ಯದ ಮುಖಂಡರ ಗಮನಕ್ಕೆ ತಂದು ಆಗಿರುವ ಸಮಸ್ಯೆಗಳನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡೋಣ. ಮುಂದಿನ ಚುನಾವಣೆಗಳನ್ನು ಗೆಲ್ಲಲು ಸಿದ್ದರಾಗೋಣವೆಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದೆ. ಕಾಂಗ್ರೆಸ್ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ, ನಮ್ಮ ಮೇಲೆ ಗೂಬೆ ಕೂರಿಸಿದರು. ಪೊಲಿಟಿಕಲ್ ಕನ್ಸಲ್ಟೆಂಟ್ ಕೊಟ್ಟಿರುವ ಗ್ಯಾರೆಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದರು. ಆದರೆ ಯಾವ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಜಾರಿಮಾಡಿಲ್ಲ, ಮಹಿಳೆಯರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಈ ಸೋಲಿನಿಂದ ಕಾರ್ಯಕರ್ತರು ಕುಗ್ಗುವ ಅವಶ್ಯಕತೆ ಇಲ್ಲ. ಕೆಟ್ಟ ಆಡಳಿತ ನೀಡಿ, ಭ್ರಷ್ಟಾಚಾರ ಮಾಡಿ ನಾವು ಅಧಿಕಾರ ಕಳೆದುಕೊಂಡಿಲ್ಲ. ನಮ್ಮ ಮೇಲಿನ ಅಪಪ್ರಚಾರ ಸುಳ್ಳು ಎಂಬುದನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ನೋವನ್ನು ಶಮನ ಮಾಡಲು, ಅವರಿಗೆ ಬಲ ತುಂಬಲು ರಾಜ್ಯದಾದ್ಯಂತ ಸಭೆಯನ್ನು ಮಾಡುತ್ತಿದ್ದೇವೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ನಿರ್ಧಾರ ಮಾಡೋಣ ಎಂದು ಕರೆ ನೀಡಿದರು.
ಸಭೆಯಲ್ಲಿ ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್, ಶಾಸಕ ಶ್ರೀವತ್ಸ, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಎಸ್.ಬಾಲರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಉಪಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ನಾಗಶ್ರೀಪ್ರತಾಪ್, ಆರ್.ಸುಂದರ್, ಕುಮಾರಸ್ವಾಮಿ ಉಪಸ್ಥಿತರಿದ್ದರು.