ಕಾಂಗ್ರೆಸ್ ಮೇಲೆ ಜನರು ಇಟ್ಟಿದ್ದ ನಿರೀಕ್ಷೆಗಳು ಹುಸಿಯಾಗಿದೆ

06chn4 (1)
Published on

ಚಾಮರಾಜನಗರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿವೆ. ಒಬ್ಬ ಅನುಭವಿ ಮುಖ್ಯಮಂತ್ರಿ, 14 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅಧಿಕಾರಲ್ಲಿದ್ದಾರೆ. ಆದರೆ ನಿರೀಕ್ಷೆಗಳು ಮಾತ್ರ ಹುಸಿಯಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಕುಲುಮೆ ರಸ್ತೆಯಲ್ಲಿರುವ ನೂತನ ಬಿಜೆಪಿ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವುಗಳು ಮೋಸ ಹೋಗಿದ್ದೇವೆ ಎಂಬ ಭಾವನೆ ಜನರಲ್ಲಿದೆ. ಗ್ಯಾರಂಟಿ ಯೋಜನೆಗಳ ಅರೆಬರೆ ಅನುಷ್ಠಾನವಾಗಿದ್ದು, ಎಷ್ಟು ಜನರಿಗೆ ತಲುಪಿದೆ ಎನ್ನುವದೇ ಗೊತ್ತಿಲ್ಲ. ಸರ್ಕಾರದ ನಡವಳಿಕೆಯಿಂದ ರೈತರು ಹತಾಶರಾಗಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರ ದಲಿತ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಹೊಸ ಯೋಜನೆ ಜಾರಿಗೆ ತರುತ್ತಿಲ್ಲ. ಯಾವೊಬ್ಬ ಶಾಸಕ ಕೂಡ ಸ್ವ ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ರಸ್ತೆ ಅಭಿವೃದ್ಧಿಯಾಗುತ್ತಿಲ್ಲ. ಆಸ್ಪತ್ರೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಾಕಷ್ಟು ಕಾರಣಗಳಿವೆ. ಸಂಪೂರ್ಣ ಶ್ರಮ ಹಾಕಬೇಕಿತ್ತು. ಇದು ಕೊರತೆಯಾಯ್ತು. ವಿ.ಸೋಮಣ್ಣ ಮತ್ತು ಬಸನಗೌಡಪಾಟೀಲ್ ಯತ್ನಾಳ್ ವಿಚಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವುದಿಲ್ಲ. ಸಾಕಷ್ಟು ಬದಲಾವಣೆಯಾಗಿದೆ.
ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ಸೋಮಣ್ಣ ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಪಕ್ಷಕ್ಕೆ ಹಿರಿಯ ನಾಯಕರಾದ ಸೋಮಣ್ಣ ಅವರ ಕೊಡುಗೆ ಇದೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿತ್ತು. ಆದರೆ ಸೋಲಾಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ಸೋಮಣ್ಣ ಅವರೊಂದಿಗೆ ಕುಳಿತು ಮಾತನಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net