

ಚಾಮರಾಜನಗರ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ನಮ್ಮ ಜಿಲ್ಲೆಯು 5ನೇ ಸ್ಥಾನದೊಳಗಿದ್ದು, ಉತ್ತಮ ಸಾಧನೆ ಮಾಡಲು ನಿಮ್ಮೆಲ್ಲರ ಪರಿಶ್ರಮ ಅಗತ್ಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜೆಎಸ್‌ಎಸ್ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಹಾಗೂ ನಮ್ಮ ಸಂಸ್ಕೃತಿಯ ಪರಂಪರೆಯ ಬಗ್ಗೆ ಅರಿವು ಮೂಡಿಸಿ, ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದರು.
ಡಯಟ್ ಕಾಲೇಜಿನ ಉಪ ಪ್ರಾಂಶುಪಾಲ ಲಿಂಗರಾಜೇ ಅರಸ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿ, ಶಿಕ್ಷಣ ವ್ಯಕ್ತಿತ್ವ ವಿಕಸನ ಮಾಡುತ್ತದೆ. ಪ್ರಬುದ್ದ ಮನುಷ್ಯನನ್ನಾಗಿ ರೂಪಿಸುತ್ತದೆ. ಶಿಕ್ಷಣ ಇಲ್ಲದ ವ್ಯಕ್ತಿ ಪ್ರಾಣಿಗಿಂತ ಕಡೆ. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣವನ್ನು ಪಡೆದು, ತಂದೆ,ತಾಯಿ ಹಾಗೂ ಶಾಲೆಗೆ ಕೀರ್ತಿ ತರಬೇಕು. ಮೊದಲು ಗುರು ಹಿರಿಯರು ಹಾಗೂ ತಂದೆತಾಯಿಯನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜೆಎಸ್‌ಎಸ್ ಅಕ್ಷರ ದಾಸೋಹ ಸಮಿತಿಯ ಅಧ್ಯಕ್ಷ ಆರ್.ಕುಮಾರಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ಸಿದ್ದಪ್ಪ, ಸಹ ಶಿಕ್ಷಕರಾದ ಡಿ. ಶಿವಕುಮಾರ್, ಡಿ.ಜಿ. ರಾಜೇಂದ್ರ, ಪುಷ್ಪಲತಾ, ಭವಾನಿ ಪ್ರಸಾದ್, ಶೋಭಾ, ಶಿವಾನಂದ, ಉಮೇಶ್, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.