

ಚಾಮರಾಜನಗರ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಗುರುವಾರ ಕೆಲಕಾಲ ತುಂತುರು ಮಳೆ ಸುರಿಯಿತು.
ನಗರದಲ್ಲಿ ಮುಂಜಾನೆಯಿಂದಲೇ ದಿನವಿಡೀ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ವೇಳೆಗೆ ದಿಡೀರ್ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಕೆಲಕಾಲ ಪರದಾಡುವಂತಾಯಿತು. ನಗರದ ಪ್ರಮುಖ ರಸ್ತೆಗಳಾದ ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಡಿವಿಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಮಳೆಯಿಂದಾಗಿ ಕೆಲಕಾಲ ಜನರು ಕಿರಿಕಿರಿ ಅನುಭವಿಸಿದರು. ಬಳಿಕ ಅರ್ಧ ತಾಸುಗಳ ಕಾಲ ತುಂತುರು ಮಳೆ ಸುರಿಯಿತು.
ಸಂಜೆಯವರೆಗೂ ಮೋಡಕವಿದ ಮತ್ತು ಚಳಿಯ ವಾತಾವರಣದಿಂದಾಗಿ ಜನರು ಬೆಚ್ಚಗಿನ ಹೊದಿಕೆ ಹಾಗೂ ಛತ್ರಿಗಳ ಮೊರೆ ಹೋದರು. ಹವಮಾನ ವೈಪರೀತ್ಯದಿಂದಾಗಿ ಸುರಿದ ಮಳೆಗೆ ಜನರು ನಡುಗಿದರು. ಇನ್ನು ಗ್ರಾಮೀಣ ಪ್ರದೇಶದಲ್ಲೂ ಸುರಿದ ಮಳೆಯಿಂದಾಗಿ ಕೃಷಿ ಟಡುವಟಿಕೆಗಳಿಗೆ ತೊಂದರೆ ಉಂಟಾಯಿತು. ಹುರುಳಿ ಹಾಗೂ ಇನ್ನಿತರೆ ಬೆಳೆಗಳ ಒಕ್ಕಣೆ ಮಾಡುತ್ತಿದ್ದ ರೈತರು ಮಳೆಯಿಂದ ಸಮಸ್ಯೆ ಅನುಭವಿಸುವಂತಾಯಿತು.