

ಚಾಮರಾಜನಗರ: ನಗರಸಭೆ ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡುವಂತೆ ಒತ್ತಾಯಿಸಿ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾ ಸಂಘದ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ನಗರದ ನಗರಸಭೆ ಕಚೇರಿ ಮುಂಭಾಗ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು, ನಗರಸಭೆ ಪೌರಾಯುಕ್ತರು, ಯೋಜನಾ ನಿರ್ದೇಶಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾ ಸಂಘದ ಜಿಲ್ಲಾಧ್ಯಕ್ಷ ಶಂಕರ್ ಸಿ.ಅಂಕನಶೆಟ್ಟಿಪುರ ಮಾತನಾಡಿ, ನಗರಸಭೆಯಲ್ಲಿ ಕಳೆದ 2 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಸದ ವಿಲೇವಾರಿ ವಾಹನ ಚಾಲಕರು, ಒಳಚರಂಡಿ, ಲೋಡರ್ಸ್, ಕ್ಲೀನರ್ ಗಳು ಸೇವೆ ಮಾಡುತ್ತಿದ್ದು, ಇವರಿಗೆ ಪ್ರತಿ ತಿಂಗಳು ಸಂಬಳವಾದರೆ ಮಾತ್ರ ಅವರ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದರೆ ನಗರಸಭೆಯಲ್ಲಿ ಈವರೆಗೂ ಪ್ರತಿ ತಿಂಗಳು ಸಂಬಳ ನೀಡುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿರುತ್ತದೆ ಎಂದು ಹೇಳಿದರು.
ಕಳೆದು ನಾಲ್ಕು ತಿಂಗಳಿಂದ ಸಂಬಳ ನೀಡದಿರುವುದರಿಂದ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಸೂಕ್ತ ಸಮಯಕ್ಕೆ ಸಂಬಳ ನೀಡುವಂತೆ ಸೂಚನೆ ನೀಡಿದ್ದರೂ ಪೌರಾಯುಕ್ತರು ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.ಈ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಗರಸಭೆ ಹೊರಗುತ್ತಿಗೆ ನೌಕರರ ಸಮಸ್ಯೆ ಆಲಿಸಿದರು. ೨ ತಿಂಗಳ ಸಂಬಳವನ್ನು ನೌಕರರ ಖಾತೆಗೆ ಜಮಾ ಮಾಡಿಸುವಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಪ್ರತಿ ತಿಂಗಳು ಒಂದರಿಂದ ಐದನೇ ತಾರೀಖಿನೊಳಗೆ ಸಂಬಳವನ್ನು ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು. ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯವನ್ನು ಕಲ್ಪಿಸಬೇಕು. ಹೊರಗುತ್ತಿಗೆ ನೌಕರರಿಗೆ ಸೂಕ್ತ ಸಮವಸ್ತ್ರ ಕೊಡಿಸಬೇಕು. ನಗರಸಭೆಯಿಂದ ಕಾರ್ಮಿಕರಿಗೆ ಗುರುತಿನಚೀಟಿ ನೀಡಬೇಕು. ಕಾಲಕಾಲಕ್ಕೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶ್ ವಾಜಪೇಯಿ, ಹೊರಗುತ್ತಿಗೆ ನೌಕರರಾದ ಬಿ.ಕುಮಾರ್, ಅಜಿತ್, ಸುಜಿತ್, ಪಾರ್ವತಿ, ಜಾನಕಿ, ಕೆ.ಪ್ರಭು, ಕಾರ್ತೀಕ್, ರಾಮಕೃಷ್ಣ, ಎಂ.ರಾಜೇಂದ್ರ, ಕುಮಾರ್, ಮಹೇಶ್, ಶಿವರಾಜ್, ಅರ್ಫಜ್ ಹಾಗೂ ಇತರರು ಭಾಗವಹಿಸಿದ್ದರು.