

ಚಾಮರಾಜನಗರ: ಇಪ್ಪತ್ತೈದು ವರ್ಷಗಳ ಹಿಂದೆ ಮೈಸೂರಿನಿಂದ ಚಾಮರಾಜನಗರ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಯಿತು. ಆದರೂ ಇಂದಿಗೂ ಮೈಸೂರಿನ ನೆರಳಲ್ಲೇ ಚಾಮರಾಜನಗರ ಇದ್ದಂತಿದೆ. ಪ್ರತಿ ವರ್ಷದ ಆರಂಭದಲ್ಲೂ ವೇಗದ ಅಭಿವೃದ್ಧಿಯ ಆಶಾಭಾವವನ್ನು ಜಿಲ್ಲೆ ಇಟ್ಟುಕೊಂಡಿದೆ. 2024ರಲ್ಲಿ ಪ್ರಗತಿಯ ನಿರೀಕ್ಷೆಯನ್ನು ಹೊಂದಿದೆ.
ಮೈಸೂರು ಮತ್ತು ಚಾಮರಾಜನಗರದ ನಡುವೆ ಐತಿಹಾಸಿಕ ಬಾಂಧವ್ಯವಿದೆ. ಆದರೆ ಪ್ರಸ್ತುತ ಇಲ್ಲಿನ ಕೊರತೆಗಳನ್ನು ನೀಗಿಸಿಕೊಳ್ಳಲು ಅಲ್ಲಿಗೆ ಹೋಗಬೇಕಾದ ಸಂಪರ್ಕ ಬಂಧ ಏರ್ಪಟ್ಟಿದೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಆಸ್ಪತ್ರೆ ಇದೆ. ಆದರೂ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗಳನ್ನೇ ಅವಲಂಬಿಸಬೇಕು. ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ಕೊರತೆಗಳೇ ತುಂಬಿಕೊಂಡಿವೆ. ಹೀಗಿದ್ದ ಮೇಲೆ ಮತ್ತೆ ಮೈಸೂರಿನ ದಾರಿ ಹಿಡಿಯಬೇಕಾಗುತ್ತಿದೆ.
ಶೈಕ್ಷಣಿಕವಾಗಿ ಜಿಲ್ಲೆ ಮತ್ತಷ್ಟು ಪ್ರಗತಿ ಸಾಧಿಸಲೇಬೇಕು. ಸರ್ಕಾರಿ ಶಾಲಾ, ಕಾಲೇಜುಗಳ ಲಿತಾಂಶ ಎತ್ತರಕ್ಕೇರಬೇಕು. ಚಾಮರಾಜನಗರ ವಿಶ್ವವಿದ್ಯಾಲಯದ ಅಳಿವು-ಉಳಿವಿನ ಪ್ರಶ್ನೆಗೆ ಉತ್ತರ ಸಿಗಲೇಬೇಕು. ಶಿಕ್ಷಣಕ್ಕೆ ಮಹತ್ವ ಸಿಗದೆ ಎರಡು ತಲೆಮಾರುಗಳು ಅನಕ್ಷರತೆಯಿಂದ ಬಳಲುತ್ತಿರುವುದನ್ನು ಸದ್ಯಕ್ಕೆ ಕಾಣಬಹುದು. ಈಗಿನ ತಲೆಮಾರಿಗೆ ಶಿಕ್ಷಣವೇನೋ ಸಿಗುತ್ತಿದೆ. ಆದರೆ ಪೂರ್ಣಗೊಳಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ. ಗುಣಮಟ್ಟದ ಶಿಕ್ಷಣ ದೊರೆಯಬೇಕು. ಇದಕ್ಕಾಗಿ ಸರ್ಕಾರಿ ಶಾಲೆಯಿಂದ ವಿಶ್ವವಿದ್ಯಾಲಯದವರೆಗಿನ ಸೌಲಭ್ಯ ಜಿಲ್ಲೆಯಲ್ಲಿ ಇರಬೇಕು.
ಆರ್ಥಿಕ ಸದೃಢತೆಯತ್ತ ಹೆಜ್ಜೆ: ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿದೆ. ಬೆಂಗಳೂರು- ಮೈಸೂರು ಮಧ್ಯೆ ಇರುವ ಮಂಡ್ಯ, ರಾಮನಗರ ಅಭಿವೃದ್ಧಿಯತ್ತ ಸಾಗುತ್ತಿದೆ. ಬೆಂಗಳೂರು ಮಾರ್ಗದ ನಂಟು ಹೊಂದಿರುವ ಕೊಳ್ಳೇಗಾಲ ವಾಣಿಜ್ಯ ಕೇಂದ್ರವಾಗಿ ಬೆಳವಣಿಗೆ ಹೊಂದುತ್ತಿದೆ. ಗುಂಡ್ಲುಪೇಟೆಯಲ್ಲೂ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಈ ಎರಡು ತಾಲೂಕುಗಳಿಗೆ ಹೋಲಿಸಿದರೆ ಚಾಮರಾಜನಗರ, ಯಳಂದೂರು, ಹನೂರಿನಲ್ಲಿ ಆರ್ಥಿಕತೆ ಏರುಗತಿಯಲ್ಲಿಲ್ಲ. ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೊಸ ಕಾರ್ಖಾನೆಗಳು ಸ್ಥಾಪನೆಯಾಗುತ್ತಿವೆ. ಕೆಲವು ಕಂಪನಿಗಳು ಶುರುವಾಗಿ ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ. ಇದರ ಪ್ರಮಾಣ ಹೆಚ್ಚಾದರೆ ಹಳ್ಳಿಗಾಡಿನ ಮಹಿಳೆಯರು ಸ್ವಾವಲಂಬಿಗಳಾಗಲು ಸಹಕಾರಿಯಾಗುತ್ತದೆ. ಶೈಕ್ಷಣಿಕ ವಿದ್ಯಾರ್ಹತೆಗೆ ತಕ್ಕಂತಹ ಉದ್ಯೋಗಕ್ಕಾಗಿ ಯುವಜನರು ಹುಡುಕಾಟ ನಡೆಸಿದ್ದಾರೆ. ಸ್ವಂತ ಜಿಲ್ಲೆಯಲ್ಲಿ ಕೆಲಸ ಕೇಳುವವರೇ ಹೆಚ್ಚಿದ್ದಾರೆ. ಇವರ ಬೇಡಿಕೆ ಪೂರೈಸಬೇಕಾದ ಜವಾಬ್ದಾರಿ ಸರ್ಕಾರಗಳ ಮೇಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಡಲೇಬೇಕು.
ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ
ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಧಾರ್ಮಿಕ, ಆಧ್ಯಾತ್ಮಿಕ, ಜಲಸಾಹಸ, ಸಾಂಪ್ರದಾಯಿಕ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಆರ್‌ಟಿ ಮತ್ತು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಹೊರರಾಜ್ಯ ಮತ್ತು ಜಿಲ್ಲೆಗಳ ಪ್ರವಾಸಿಗರು ಬರುತ್ತಿದ್ದಾರೆ. ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದರೆ ಪ್ರವಾಸಿಗರು ಮತ್ತಷ್ಟು ಆಕರ್ಷಿತರಾಗುತ್ತಾರೆ. ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ. ವ್ಯಾಪಾರ-ವಹಿವಾಟು ಹೆಚ್ಚಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಮಾತಲ್ಲೇ ಉಳಿದಿರುವುದರಿಂದ ಪ್ರತಿ ವರ್ಷವೂ ಈ ವಿಚಾರದಲ್ಲಿ ನಿರೀಕ್ಷೆಯನ್ನಷ್ಟೇ ಇಟ್ಟುಕೊಳ್ಳಬೇಕಾಗಿದೆ.
ರೈತರಿಗೆ ಸೌಲಭ್ಯ ಕೊಡಿ
2024 ರೈತರ ಪಾಲಿಗೆ ಆಶಾದಾಯಕವಾಗಬೇಕಾದರೆ ವೈಜ್ಞಾನಿಕ ಪರಿಹಾರಗಳು ಅನುಷ್ಠಾನಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಕೆರೆ ತುಂಬಿಸುವ ಯೋಜನೆ ನೀರಾವರಿ ಸಮಸ್ಯೆಯನ್ನು ತಗ್ಗಿಸಿತು. ಹೀಗಾದ ಮಾತ್ರಕ್ಕೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಬರಗಾಲ ಬಾರದಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಜಿಲ್ಲೆಯ ಮಾರುಕಟ್ಟೆಗಳಿಗೆ ಕೇರಳ ಮತ್ತು ತಮಿಳುನಾಡುಗಳಿಂದ ವ್ಯಾಪಾರಿಗಳು ಬರುತ್ತಾರೆ. ಇದೇ ರೀತಿ ಇಲ್ಲಿನ ರೈತರು ಕೇರಳ ಮತ್ತು ತಮಿಳುನಾಡಿಗೆ ತರಕಾರಿ ಮಾರಾಟ ಮಾಡುತ್ತಾರೆ. ಈ ವ್ಯಾಪಾರ ಸಂಬಂಧವನ್ನು ಗಟ್ಟಿಗೊಳಿಸಬೇಕಾದರೆ ಮಾರುಕಟ್ಟೆ ವ್ಯವಸ್ಥೆ ಬಲಗೊಳ್ಳಬೇಕು. ದಲ್ಲಾಳಿಗಳು ವ್ಯಾಪಾರಸ್ಥರಾಗಬಾರದು. ರೈತರಿಂದಲೇ ನೇರವಾಗಿ ಬೆಳೆ ಮಾರಾಟವಾಗಬೇಕು. ಚಾಮರಾಜನಗರದ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಾಗಬೇಕು. ಸಾವಯವ ಕೃಷಿಯಲ್ಲಿ ತೊಡಗಿರುವ ರೈತರಿಗೆ ಪ್ರೋತ್ಸಾಹ ಮತ್ತು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕಿದೆ. ಸರ್ಕಾರದಿಂದ ಸೌಲಭ್ಯ ಪಡೆಯಲು ಕಚೇರಿಗಳಿಗ ಅಲೆಯುವುದು ತಪ್ಪಬೇಕು. ರೈತಸ್ನೇಹಿ ಆಡಳಿತ ವ್ಯವಸ್ಥೆ ಜಾರಿಯಾಗಬೇಕೆಂಬುದು ನಿರಂತರ ಒತ್ತಾಯವಾಗಿದೆ.
ಕುಗ್ರಾಮಗಳು ಸುಗ್ರಾಮಗಳಾಗಲಿ:
ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಮೂಲಸೌಕರ್ಯಗಳೇ ಇಲ್ಲದ ಹಲವಾರು ಕುಗ್ರಾಮಗಳಿವೆ. ಇವುಗಳಿಗೆ 2024ರಲ್ಲಿ ಮೂಲಸೌಕರ್ಯ ತಲುಪಿ ಸುಗ್ರಾಮಗಳಾಗಬೇಕಾಗಿದೆ. ಮಲೆ ಮಹದೇಶ್ವರಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಇನ್ನಿತರ ಸೌಲಭ್ಯಗಳೇ ಇಲ್ಲ. ಇದಕ್ಕೆ ಅರಣ್ಯ ಕಾಯ್ದೆ ಅಡ್ಡಿಯಾಗುತ್ತದೆ. ಕಾನೂನಿನ ನಿಯಮಾನುಸಾರವೇ ಜನರಿಗೆ ಮೂಲಸೌಕರ್ಯ ಕಲ್ಪಿಸಿಕೊಡಬಹುದಾಗಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ಗ್ರಾಮಗಳು ಅಭಿವೃದ್ಧಿ ಕಾಣುತ್ತಿಲ್ಲ. ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಹಳ್ಳಿಗಳ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಕೆಲವು ಊರುಗಳಲ್ಲಿ ಸವಲತ್ತುಗಳಿಲ್ಲ.