

ಚಾಮರಾಜನಗರ:ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲಾದ್ಯಂತ ವಿವಿಧ ಕಡೆಗಳಲ್ಲಿ ಯೋಗಾಭ್ಯಾಸ ಮಾಡಿ ಆಚರಣೆ ಮಾಡಲಾಯಿತು.
ಜಿಲ್ಲಾಡಳಿತ ಮತ್ತು ಸಂಘ, ಸಂಸ್ಥೆಗಳು, ಶಾಲೆಗಳಲ್ಲಿ ಬುಧವಾರ ಯೋಗ ದಿನ ಹಮ್ಮಿಕೊಳ್ಳಲಾಗಿತ್ತು. ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು, ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಯೋಗದ ಮಹತ್ವ ತಿಳಿಸಲಾಯಿತು.
ನಗರದ ನಂದಿಭವನದಲ್ಲಿ ಆಯುಷ್ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಬಗ್ಗೆ ನಾವು ಚಿಂತನೆ ಮಾಡುತ್ತಿಲ್ಲ. ಮನುಷ್ಯ ತನ್ನ ಸಂತೋಷಕ್ಕಾಗಿ ಸಕಲ ಪ್ರಯತ್ನಗಳನ್ನೂ ನಡೆಸುತ್ತಾನೆ. ಎಲ್ಲವನ್ನೂ ಸಂಪಾದನೆ ಮಾಡಲು ಮನುಷ್ಯ ಜೀವಂತವಾಗಿರಬೇಕು. ಹಾಗಾಗಿ ಮನುಷ್ಯ ಆರೋಗ್ಯವಾಗಿ ಇರಬೇಕೆಂದರೆ ಪ್ರಕೃತಿಯೊಂದಿಗಿನ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕು ಎಂದರು.
ಪ್ರಾಣಾಯಾಮ ನಾವು ನಮ್ಮನ್ನು ಪ್ರಕೃತಿಗೆ ಅರ್ಪಿಸಿಕೊಳ್ಳುವಂತೆ ಮಾಡುತ್ತದೆ. ಉಸಿರಾಟದ ಯೋಗಾಭ್ಯಾಸಗಳು ಮಾನಸಿಕ ಚಿಕಿತ್ಸೆಯನ್ನು ನೀಡುತ್ತದೆ. ಔಷಧಿಗಳಿಂದ ಗುಣವಾಗದ ರೋಗಗಳನ್ನು ಧ್ಯಾನ ಗುಣಪಡಿಸುತ್ತದೆ. ನಮ್ಮಿಂದ ಉದ್ಭವವಾಗುವ ಸಮಸ್ಯೆಯ ಮೂಲ ನಮ್ಮೊಳಗೇ ಇದ್ದು, ಅದನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳಬೇಕು. ದಿನದ 24 ಗಂಟೆಯಲ್ಲಿ ಯಂತ್ರಗಳಂತೆ ಕೆಲಸ ಮಾಡುತ್ತೇವೆ. ನಮಗಾಗಿ ಕೇವಲ 5 ನಿಮಿಷ ಸಮಯ ಕೊಡಬೇಕೆಂದರೆ ಧ್ಯಾನ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ 500ಕ್ಕೂ ಹೆಚ್ಚು ಜನರು ಯೋಗ ಪ್ರದರ್ಶನ ಮಾಡಿದರು. ಶ್ವಾಸಕ್ರಿಯೆ, ತ್ರಿಕೋನಾಸನ, ವಜ್ರಾಸನ, ವೀರಾಸನ, ತ್ರಿಕೋನಾಸನ, ಮಂಡೂಕಾಸನ, ಸೂರ್ಯ ನಮಸ್ಕಾರ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ನಗರಸಭೆ ಆಯುಕ್ತ ರಾಮದಾಸ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ, ಯೋಗ ಶಿಕ್ಷಕ ಲಾಮೃತ ಅಜಿತ್ ಮತ್ತು ಇತರರು ಇದ್ದರು.