ನಂಜುಂಡೇಶ್ವರನಿಗೆ ಎಂಜಲು ನೀರು ಎರಚಿದ ಪ್ರಕರಣ ಖಂಡಿಸಿ ಪ್ರತಿಭಟನೆ

31chn3
Published on

ಚಾಮರಾಜನಗರ : ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರ ಉತ್ಸವಮೂರ್ತಿಗೆ ಎಂಜಲು ನೀರು ಎರಚಿರುವ ಕಿಡಿಗೇಡಿಗಳನ್ನು ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಭಗತ್ ಯುವಸೇನೆ ವತಿಯಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ, ಮೈಸೂರು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು, ಮುಜರಾಯಿ ಇಲಾಖೆ, ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಭಗತ್ ಯುವಸೇನೆಯ ಮುಖಂಡ ವಿರಾಟ್‌ಶಿವು ಮಾತನಾಡಿ, ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ ಹಿಂದುಗಳ ಅಸ್ಮಿತೆಯಾಗಿದೆ. ಕೋಟ್ಯಾಂತರ ಭಕ್ತರ ನಂಬಿಕೆಯ ನಂಜುಂಡೇಶ್ವರ ಉತ್ಸವ ಮೂರ್ತಿಗೆ ಅಪವಿತ್ರ ನೀರನ್ನು ಎರಚಿರುವುದು ಸಮಸ್ತ ಹಿಂದು ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಘಟನೆ ನಡೆದು ನಾಲ್ಕೈದು ದಿನಗಳು ಆಗಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳದೆ ಇರುವುದು ಹಿಂದುಗಳಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ ಎಂದರು.

ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬುಲೆಟ್ ಚಂದ್ರು, ಪ್ರವೀಣ್, ಫೃಥ್ವಿ, ಸಿ.ವಿ.ಮಣಿಕಂಠ, ರಾಘವೇಂದ್ರ, ಪ್ರಸನ್ನ, ಹರೀಶ್, ರಾಜೇಂದ್ರ, ಮಂಜುನಾಥ್, ಮನು, ಟಗರು ಶಿವು, ರಮೇಶ್, ನಾಗೇಂದ್ರ, ರವಿಹೇಮಂತ್, ಹಿಂದೂಸ್ತಾನ್ ನಾಗಚೇತನ್, ಪುನೀತ್, ಅಭಿ ,ಪ್ರಮೋದ್, ಹರ್ಷದ್ ಗೌಡ, ಅಶ್ವಿನ್, ಸಂತು ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net