

ಚಾಮರಾಜನಗರ : ಕಾಗಲವಾಡಿ ಗ್ರಾಮದ ರೈತರು ಯಾವುದೇ ಭೂಮಿಯನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಸಿ. ಶಿಲ್ಪಾನಾಗ್ ಅವರಿಗೆ ಗ್ರಾಮದ ವ್ಯವಸಾಯಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬುಧವಾರ ಸ್ಪಷ್ಟನೆ ಪತ್ರ ನೀಡಿದ್ದಾರೆ.
ತಾಲೂಕಿನ ಕಾಗಲವಾಡಿ ಗ್ರಾಮದ 20ಕ್ಕೂ ಹೆಚ್ಚು ಕುಟುಂಬಗಳು ಹೊಂಡರಬಾಳು ಸರ್ವೇ ನಂಬರ್ 167ರಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಈ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ವ್ಯವಸಾಯ ಮಾಡಲಾಗುತ್ತಿದೆ ಎಂದು ಚಂದಕವಾಡಿ ಹೋಬಳಿ ಮಟ್ಟದಲ್ಲಿ ನಡೆದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ನಲ್ಲೂರು ಗ್ರಾಮದ ಸೋಮೇಶ್ವರ ಆರೋಪ ಮಾಡಿದ್ದರು.
ಈ ಹಿನ್ನೆಲೆ ಕಾಗಲವಾಡಿ ಗ್ರಾಮದ ವ್ಯವಸಾಯಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಸಂಘದ ಸಂಘಟನಾ ಕಾರ್ಯದರ್ಶಿ ರುದ್ರೇಶ್ (ಗುಂಡಣ್ಣ) ಮಾತನಾಡಿ, ಚಂದಕವಾಡಿ ಹೋಬಳಿ ಮಟ್ಟದಲ್ಲಿ ನಡೆದ ಎಸ್ಸಿ , ಎಸ್ಟಿ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ನಲ್ಲೂರು ಗ್ರಾಮದ ಸೋಮೇಶ್ವರ ಅವರು ಹೊಂಡರಬಾಳು ನಾಲ್ವರು ರೈತರಿಗೆ ಜಮೀನು ಹಂಚಿಕೆ ಮಾಡಿದ್ದು, ಇಲ್ಲಿರುವ ಜಮೀನಿಗೆ ತಂತಿ ಬೇಲಿ ಹಾಕಿಕೊಂಡು ಅವರು ಜಮೀನಿಗೆ ಬರದಂತೆ ತಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದು ಸುಳ್ಳಾಗಿದ್ದು, 1985 ರಲ್ಲಿ ಅರಣ್ಯ ಸಚಿವರಾಗಿದ್ದ ದಿ.ಬಿ.ರಾಚಯ್ಯ ಅವರು ಹೊಂಡರಬಾಳು ವ್ಯಾಪ್ತಿಯಲ್ಲಿರುವ 167ರ ಸರ್ವೇ ನಂಬರ್‌ನಲ್ಲಿ 144 ಎಕರೆ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಲು ಕಾಗಲವಾಡಿ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ತಲಾ ನಾಲ್ಕು ಎಕರೆಯಂತೆ ಭೂಮಿ ಮಂಜೂರು ಮಾಡಿಸಿದ್ದರು. ಇದಕ್ಕೆ ಸಾಗುವಳಿ ಪತ್ರವನ್ನು ನೀಡಿದ್ದಾರೆ ಎಂದು ಹೇಳಿದರು.
ನಲ್ಲೂರು ಗ್ರಾಮದ ಸೋಮೇಶ್ವರ ಅವರ ಆರೋಪ ಸುಳ್ಳಿನಿಂದ ಕೂಡಿದೆ. ನಾವು ಖರೀದಿ ಮಾಡಿರುವ ಜಾಗದಲ್ಲಿ ತಿರುಗಾಡುತ್ತಿದ್ದು, ಕಾಡು ಪ್ರಾಣಿಗಳ ರಕ್ಷಣೆಗಾಗಿ ನಮ್ಮ ಜಮೀನಿಗೆ ಬೇಲಿ ಹಾಕಿದ್ದೇವೆ. ಈಗಾಗಲೇ ಪೋಡಿಗೆ ನಾವು ಅರ್ಜಿ ಸಲ್ಲಿಸಿದ್ದು, ಇದನ್ನು ಉಪ ವಿಭಾಗಾಧಿಕಾರಿಗಳ ಮುಖಾಂತರ ಪೋಡು ಮಾಡಿ, ಕಾಗಲವಾಡಿ ಗ್ರಾಮದ ರೈತರಿಗೆ ವ್ಯವಸಾಯ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಂಘದ ಗೌರವ ಅಧ್ಯಕ್ಷ ಕೆ.ಆರ್.ಮಹದೇವಯ್ಯ, ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಎಂ.ಮಹದೇಸ್ವಾಮಿ, ಬಿ.ರಮೇಶ್‌ಮೂರ್ತಿ, ಕಾರ್ಯದರ್ಶಿ ನಾಗೇಂದ್ರ, ಖಜಾಂಚಿ ಮೋಹನ್‌ಕುಮಾರ್, ಸದಸ್ಯ ಎಂ.ಮಹದೇವಯ್ಯ, ಮರಿಲಿಂಗಯ್ಯ, ಶಿವಯ್ಯ, ಮಹದೇವಸ್ವಾಮಿ, ಕುಮಾರಸ್ವಾಮಿ, ಮಹೇಶ್ ಎಸ್.ಲಿಂಗರಾಜು, ನಾಗರಾಜು, ಗುರುಲಿಂಗಯ್ಯ, ರಾಮಯ್ಯ, ಬಸವರಾಜು ಇತರರು ಹಾಜರಿದ್ದರು.