ವೀರಶೈವ-ಲಿಂಗಾಯತ ಧರ್ಮದ ಆಚರಣೆ ಸಂಸ್ಕೃತಿ ಉಳಿಸಿ

28chn17
Published on

ಚಾಮರಾಜನಗರ : ಯುವ ಜನಾಂಗ ವೀರಶೈವ ಲಿಂಗಾಯತ ಸಮಾಜದ ಆಚಾರ, ವಿಚಾರಗಳು ಹಾಗೂ ಸಂಸ್ಕೃತಿ ಪರಂಪರೆಯನ್ನು ಅಳವಡಿಸಿಕೊಂಡು ಸಮಾಜವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀಚನ್ನಬಸವಸ್ವಾಮೀಜಿ ತಿಳಿಸಿದರು.

ನಗರದ ಅನುಭವ ಮಂಟಪದಲ್ಲಿ ಕೊಳ್ಳೇಗಾಲ ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಶ್ರೀಬಸವ ಸೇವಾ ಪತ್ತಿನ ಸಹಕಾರ ಸಂಘ ನಿ. ಹಾಗೂ ಬಸವ ಮಹಾಮನೆ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬಸವ ಧರ್ಮ ಪಾಲನೆ ಮಾಡುವವರು ಹಾಗೂ ವೀರಶೈವ ಲಿಂಗಾಯತ ಧರ್ಮದ ಘನತೆ ಗೌರವವನ್ನು ಕಾಪಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಯುವಕ, ಯುವತಿಯರಲ್ಲಿ ನಮ್ಮ ಧರ್ಮ ಮತ್ತು ಸಮಾಜ ಎಂಬ ಪ್ರೌಢಿಮೆ ಮತ್ತು ಆಸಕ್ತಿ ಕಡಿಮೆಯಾಗುತ್ತಿದೆ. ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿ, ನಮ್ಮೆಲ್ಲರಿಗೂ ಸಂಸ್ಕೃತಿ, ಅಚಾರ ವಿಚಾರಗಳು ಹಾಗೂ ಲಿಂಗಾಯತ ಧರ್ಮ ಮೂಲ ತತ್ವ ಸಿದ್ಧಾಂತವನ್ನು ಸಾರಿ ಹೋಗಿದ್ದಾರೆ. ಇದನ್ನು ಮುನ್ನಡೆಸುವ ಮತ್ತು ಸಂರಕ್ಷಣೆ ಮಾಡುವ ಮನಸ್ಸು ನಮ್ಮದಾಗಬೇಕು ಎಂದು ತಿಳಿಸಿದರು.
ಬಿಜೆಪಿ ರೈತ ಮುಖಂಡ ಮಲ್ಲೇಶ್ ಮಾತನಾಡಿ, ನಮ್ಮ ಮಕ್ಕಳಿಗೆ ವಿದ್ಯೆ ಕಲಿಸುವ ಜತೆಗೆ ನಮ್ಮ ಧರ್ಮದ ಆಚಾರ, ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಕೊಳ್ಳೇಗಾಲದಲ್ಲಿ ನೌಕರರ ಸಂಘದವರು ನಿರ್ಮಾಣ ಮಾಡುತ್ತಿರುವ ಶ್ರೀ ಶಿವಕುಮಾರಸ್ವಾಮಿ ಭವನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಪಿಆರ್‌ಒ ಆರ್.ಎಂ.ಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್, ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ಹೊಸೂರು ನಟೇಶ್, ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಮುಖಂಡರಾದ ಸಂತೇಮರಹಳ್ಳಿ ಮಾದಪ್ಪ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಕೊಳ್ಳೇಗಾಲ ಬಸವ ಸೇವಾ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಬಸವ ಮಹಾಮನೆ ಟ್ರಸ್ಟ್ ಕಾರ್ಯದರ್ಶಿ ವೀರಭದ್ರಸ್ವಾಮಿ, ಸೋಮಶೇಖಪ್ಪ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net