

ಚಾಮರಾಜನಗರ: ತಲಕಾಡಿನಿಂದ ಬಂದು ಇಲ್ಲಿ ನೆಲೆಗೊಂಡಿರುವ ಶಕ್ತಿ ದೇವತೆ ಶ್ರೀರಾಕಸಮ್ಮ ನಂಬಿಬರುವ ಭಕ್ತಾಧಿಗಳನ್ನು ದೂರದೃಷ್ಠಿಯಿಂದ ಕಾಯುತ್ತಿದ್ದಾಳೆ.
ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಸುಮಾರು 800 ವರ್ಷಗಳ ಇತಿಹಾಸವನ್ನು ಒಳಗೊಂಡಿರುವ ಶ್ರೀರಾಕಸಮ್ಮ ಸನ್ನಿಧಾನ ಸಾಕಷ್ಟು ಹೆಸರುವಾಸಿಯಾಗಿದ್ದು, ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಾಕಷ್ಟು ಭಕ್ತರು ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ. ಈ ದೇವಾಲಯದಲ್ಲಿ ತಾಯಿಯ ವಿಗ್ರಹವನ್ನು ಶ್ರೀಶಂಕರಾಚಾರ್ಯರು ಪ್ರತಿಷ್ಠಾಪನೆ ಮಾಡಿದರು ಎಂಬ ಮಾತುಗಳು ಕೇಳಿಬರುತ್ತದೆ. ಆದರೆ ಐತಿಹಾಸಿಕವಾಗಿ ತಲಕಾಡಿನಿಂದ ಶ್ರೀರಾಕಸಮ್ಮ ತಮ್ಮನಾದ ಬೊಬ್ಬೆರಾಯನ ಜತೆಗೆ ಈ ಗ್ರಾಮದಲ್ಲಿ ಬಂದು ನೆಲೆಸಿದಳು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇದೆ.
ಈ ಹಿಂದೆ ಹಳೆಯದಾದ ದೇವಾಲವನ್ನು 2012 ರಲ್ಲಿ ಭಕ್ತಾಧಿಗಳ ಸಹಕಾರದಿಂದಲೇ ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಯಿತು. ತಮಿಳುನಾಡು ಶೈಲಿಯಲ್ಲೇ ನಿರ್ಮಾಣವಾಗಿರುವ ದೇವಸ್ಥಾನದಲ್ಲಿ ಸದ್ಯಕ್ಕೆ ಶ್ರೀ ರಾಕಸಮ್ಮನ ಒಕ್ಕಲಿನವರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ಮಂಗಳವಾರ, ಗುರುವಾರ, ಭಾನುವಾರ, ಶುಕ್ರವಾರ ಅಲ್ಲದೇ ಪ್ರತಿ ಅಮಾವಾಸ್ಯೆ ಹಾಗೂ ಪೌರ್ಣಿಮೆಯ ದಿನಗಳಂದು ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಪ್ರತಿ ಆಷಾಡ ಮಾಸದಲ್ಲಿ ಮುಂಜಾನೆಯಿಂದ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗುತ್ತದೆ.
ಪ್ರತಿ ಅಮಾವಾಸ್ಯೆ ಮತ್ತು ಪೌರ್ಣಿಮೆಯ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅದಲ್ಲದೇ ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದಲ್ಲಿ ವಿಶೇಷವಾಗಿ ಅನ್ನದಾನ ಮಾಡಲಾಗುತ್ತದೆ. ಶಿವರಾತ್ರಿ ಮತ್ತು ಪ್ರಥಮ ಏಕಾದಶಿ ಹಬ್ಬಕ್ಕೆ ದೇವಾಲಯದ ಸುತ್ತಲು ಪ್ರತಿಷ್ಠಾಪನೆ ಮಾಡಿರುವ ವೀರಗಲ್ಲುಗಳಿಗೆ ಹಾಗೂ ಬೊಪಬ್ಬೆರಾಯನಿಗೆ ತಂಬಿಟ್ಟು ಮತ್ತು ಹಲಸಿನ ಹಣ್ಣಿನ ಎಡೆ ಹಾಕಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ದೇವರಿಗೆ ಅರಕೆ ಒತ್ತು ಕೊಂಡವರು ಅರಿಶಿಣ ಕುಂಕುಮ,ಬಳೆ, ನಿಂಬೆಹಣ್ಣು ಹಾಗೂ ಇನ್ನಿತರೆ ವಸ್ತುಗಳನ್ನು ನೀಡಿ, ತಾವು ಅಂದುಕೊಂಡಿರುವುದು ನೆರವೇರಲಿ ಎಂದು ತಾಯಿಯ ಮಡಿಲು ತುಂಬಿಸುತ್ತಾರೆ. ನಿಂಬೆ ಮತ್ತು ಹೂವಿನ ಹಾರ ಹಾಗೂ ಇನ್ನಿತರೆ ಅರಕೆಗಳನ್ನು ಸಲ್ಲಿಸುತ್ತಾರೆ. ಆ ನಂತರ ಅವರ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂದು ನಂಬಿಕೊಂಡು ಬರಲಾಗಿದೆ. ಶ್ರೀ ರಾಕಸಮ್ಮ ಶಕ್ತಿ ದೇವರಾಗಿದ್ದು, ಕೂಡ್ಲೂರು ಗ್ರಾಮದ ಸುತ್ತುಮುತ್ತಲಿನ ಜನರಲ್ಲದೇ ಕೊಳ್ಳೇಗಾಲ, ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.
ಐತಿಹಾಸಿಕ ಹಿನ್ನೆಲೆ:
ಶ್ರೀರಾಕಸಮ್ಮ ಒಕ್ಕಲಿನವರು ತಲಕಾಡಿನ ಮೂಲದವರಾಗಿದ್ದು, ಗಂಗರ ಕಾಲದಲ್ಲಿ ಯುದ್ಧಗಳು ಸಂಭವಿಸಿದಾಗ ಅಲ್ಲಿಂದ ಬಂದು ಕೂಡ್ಲೂರು ಗ್ರಾಮದಲ್ಲಿ ನೆಲೆಸಿದರು ಎಂದು ಹೇಳಲಾಗುತ್ತದೆ. ಮೂಕಾಸುರನ ಸಂಹಾರಕ್ಕಾಗಿ ಅವತಾರವನ್ನು ಎತ್ತಿದ ಶ್ರೀರಾಕಸಮ್ಮ ಕೂಡ್ಲೂರು ಗ್ರಾಮದಿಂದ ಆರು ಹೆಜ್ಜೆ ಮೂರು ಗೇಣು ಹಾಕಿ ಮೂಗೂರು ಗ್ರಾಮದಲ್ಲಿ ಮೂಕಾಸುರನನ್ನು ಸಂಹಾರ ಮಾಡಿದ ಕಾರಣಕ್ಕೆ ಅಲ್ಲಿ ಉಗ್ರರೂಪದಲ್ಲಿ ನೆಲೆಸಿದಳು ಎಂಬ ಪ್ರತೀತಿ ಇದೆ. ಬಳಿಕ ಕೂಡ್ಲೂರು ಗ್ರಾಮದಲ್ಲಿ ಬಂದು ತಮ್ಮ ಬೊಬ್ಬೆರಾಯನ ಜತೆಗೆ ಸೌಮ್ಯ ರೂಪದಲ್ಲಿ ನೆಲೆಸಿದ್ದಾಳೆ. ನಂತರದಲ್ಲಿ ಭಕ್ತರು ದೇವಾಲಯವನ್ನು ನಿರ್ಮಾಣ ಮಾಡಿ, ಅದೇ ನೆನಪಿನಲ್ಲಿ ಪ್ರತಿವರ್ಷ ರಥಸಪ್ತಮಿ ದಿನದಂದು ವಿಜೃಂಭಣೆಯಿಂದ ವಾರದ ಕಾಲ ಹಬ್ಬ ಆಚರಿಸುತ್ತಾರೆ. ಈ ವೇಳೆ ತಲಕಾಡಿನಲ್ಲಿ ನಡೆಯುವ ರಥೋತ್ಸವ ಮತ್ತು ತೆಪ್ಪೋತ್ಸವಕ್ಕೆ ಕೂಡ್ಲೂರು ರಾಕಸಮ್ಮ ಹೋಗುತ್ತಾಳೆ ಇಲ್ಲದಿದ್ದರೆ ರಥ ಯಾವುದೇ ಕಾರಣಕ್ಕೂ ಮುಂದೆ ಚಲಿಸುವುದಿಲ್ಲ ಎಂಬ ನಂಬಿಕೆಯನ್ನು ಇಲ್ಲಿನ ಭಕ್ತರು ಇಟ್ಟುಕೊಂಡಿದ್ದಾರೆ.
ಸತ್ಯವನ್ನು ಸಾರುವ ಕತ್ತಿ ಪವಾಡ:
ಶ್ರೀರಾಕಸಮ್ಮ ದೇವರು ಎಷ್ಟು ಸತ್ಯವಂತಳು ಎಂಬುವುದಕ್ಕೆ ೆಬ್ರವರಿ ತಿಂಗಳಿನಲ್ಲಿ ಜರುಗುವ ಶ್ರೀರಾಕಸಮ್ಮನ ಉತ್ಸವದಲ್ಲಿ ನಡೆಯುವ ಕತ್ತಿ ಪವಾಡವೇ ಸಾಕ್ಷಿ ಎಂಬುದನ್ನು ಭಕ್ತರು ಹೇಳುತ್ತಾರೆ. ಶ್ರೀರಾಕಸಮ್ಮನ ಒಕ್ಕಲಿನವರು ಉತ್ಸವದ ದಿನ ಗ್ರಾಮದ ಸಮೀಪದಲ್ಲೇ ಇರುವ ಸುವರ್ಣಾವತಿ ಹೊಳೆಯಲ್ಲಿ ಮುಂಜಾನೆಯೇ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಸತ್ತಿಗೆ ಸಮೇತವಾಗಿ ಮೆರವಣಿಗೆ ನಡೆಸುತ್ತಾರೆ. ಇದು ಮುಗಿಯುತ್ತಿದ್ದಂತೆ ದೇವಾಲಯದ ಮುಂಭಾಗ ರಾಕಸಮ್ಮನ ಒಕ್ಕಲಿನವರು ನಿಜವಾದ ಕತ್ತಿಯಲ್ಲಿ ಮೈಗೆ ಹೊಡೆದುಕೊಳ್ಳುತ್ತಾರೆ, ಆದರೆ ಯಾರೊಬ್ಬರಿಗೂ ರಕ್ತ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಶ್ರೀರಾಕಸಮ್ಮನ ವಾಹನ ಕುದುರೆಯಾಗಿದ್ದು, ದೇವಾಲಯದ ಮುಂಭಾಗ ಆಕರ್ಷಕವಾದ ಬಿಳಿಯ ಕುದುರೆ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ವಾರದ ತನಕ ನಡೆಯುವ ಹಬ್ಬ:
ಕೂಡ್ಲೂರು ಗ್ರಾಮದಲ್ಲಿ ಶ್ರೀ ರಾಕಸಮ್ಮನ ಹಬ್ಬವನ್ನು ವಿಶೇಷವಾಗಿ 7 ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಹಬ್ಬ ಆಚರಣೆ ಮಾಡುವವರೆಲ್ಲರೂ ಮೊದಲ ದಿನ ಹೊಳೆಯಲ್ಲಿ ಸ್ನಾನ ಮಾಡಿಕೊಂಡು ಬಂದು ದೇವಾಲದಲ್ಲೇ ಇರುವ ಒಲಕಲ್ಲುಗಳಲ್ಲಿ ಭತ್ತಕುಟ್ಟುವುದು ಇಲ್ಲಿನ ವಿಶೇಷವಾಗಿದೆ. ಎರಡನೇ ದಿನ ಸಮೀಪದ ಬೂದಿತಿಟ್ಟು ಗ್ರಾಮದವರು ಪೂಜೆ ಸಲ್ಲಿಸುತ್ತಾರೆ. ಮೂರನೇ ದಿನ ಗ್ರಾಮದ ಮಧ್ಯ ಭಾಗದಲ್ಲಿರುವ ಮೂಲ ಗುಡಿಯಲ್ಲಿ ಹೋಮ ಮಾಡಲಾಗುತ್ತದೆ. ನಾಲ್ಕನೇ ದಿನ ಮಡೆ ಮಾಡಿ, ನಂತರದ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಕಡೆಯ ದಿನ ಬೊಬ್ಬೆರಾಯ ಮನುಷ್ಯ ರೂಪದಲ್ಲಿ ಆರ್ಭಟ ತೋರುತ್ತಾನೆ. ಮಧ್ಯರಾತ್ರಿ ರಾಕಸಮ್ಮ ದರ್ಶನ ನೀಡಿ ಮುಂದಿನ ಹಾಗು-ಹೋಗುಗಳನ್ನು ಸಾರುತ್ತಾರೆ. ಬಳಿಕ ಇಲ್ಲಿಂದ ತಲಕಾಡಿಗೆ ಹೋಗುತ್ತಾಳೆ ಎಂಬ ಆಚರಣೆ ಇದೆ ಎಂದು ಪ್ರಧಾನ ಅರ್ಚಕ ಮಹದೇವಸ್ವಾಮಿ ಮಾಹಿತಿ ನೀಡಿದರು.
ಕೂಡ್ಲೂರು ಗ್ರಾಮದಲ್ಲಿ ನೆಲೆಸಿರುವ ಶ್ರೀರಾಕಸಮ್ಮ ಶಕ್ತಿ ದೇವರಾಗಿದ್ದು, ಸಾಕಷ್ಟು ಪವಾಡಗಳು ನಡೆಯುತ್ತಿದೆ. ಹಿಂದೆ ಇದ್ದ ದೇವಾಲಯದವನ್ನು ಜೀಣೋದ್ಧಾರ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.-ಮಹದೇವಸ್ವಾಮಿ, ಪ್ರಧಾನ ಅರ್ಚಕರು, ಶ್ರೀರಾಕಸಮ್ಮನ ದೇವಾಲಯ, ಕೂಡ್ಲೂರು, ಚಾಮರಾಜನಗರ ಶ್ರೀರಾಕಸಮ್ಮ ನಂಬಿರುವ ಭಕ್ತರನ್ನು ಯಾವುದೇ ಕಾರಣಕ್ಕೂ ಕೈಬಿಟ್ಟಿಲ್ಲ. ಆ ತಾಯಿಗೆ ದೂರದೃಷ್ಟಿ ಇದ್ದು, ಇಲ್ಲಿ ಅಲ್ಲದಿದ್ದರೂ ಬೇರೆ ಕಡೆ ಹೋದಾಗ ನಮ್ಮನ್ನು ಕಾಪಾಡುತ್ತಾಳೆ. ನಾನು ಅಂದುಕೊಂಡಿರುವುದು ನೆರವೇರಿದೆ.-ಕೃಷ್ಣ, ಭಕ್ತರು, ಕೂಡ್ಲೂರು, ಚಾಮರಾಜನಗರ.