

ಹನೂರು: ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಭಗವಾನ್ ಬುದ್ಧನ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಕರ್ನಾಟಕ ಯುವ ಘಟಕದ ಅಧ್ಯಕ್ಷ ದರ್ಶನ್ ಸೋಮಶೇಖರ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಬೌದ್ಧ ಮಹಾಸಭಾದ ವತಿಯಿಂದ ಆಯೋಜಿಸಿದ್ದ ನಾವು ಬೌದ್ಧ ಭಾರತವನ್ನು ಸಂಘಟಿಸೋಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದುಗಳು ದೇಗುಲಗಳಿಗೆ, ಕ್ರಿಶ್ಚಿಯನ್ನರು ಚರ್ಚ್‌ಗಳಿಗೆ ಹಾಗೂ ಮುಸ್ಲಿಮರು ಮಸೀದಿಗೆ ತೆರಳಿ ಪ್ರಾರ್ಥಿಸುತ್ತಾರೆ. ಹಾಗೆಯೆ, ಬಹುಜನರು ಬೌದ್ಧ ವಿಹಾರಗಳಿಗೆ ತೆರಳಿ ಧ್ಯಾನಿಸಬೇಕು. ಬುದ್ದನು ಬೋಧಿಸಿದ ಪಂಚಶೀಲ ತತ್ವಗಳನ್ನು ಅನುಸರಿಸಿ ಪ್ರಚಾರ ಪಡಿಸುವುದರ ಮೂಲಕ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು. ಜತೆಗೆ, ಬೌದ್ಧ ಧರ್ಮದ ತತ್ವಗಳನ್ನು ಪಾಲಿಸುವುದರ ಮೂಲಕ ದಮ್ಮವನ್ನು ರಾಷ್ಟ್ರೀಯ ಶಕ್ತಿಯಾಗಿ ರೂಪಿಸಬೇಕು. ಆದ್ದರಿಂದ ಈ ಕಾರ್ಯದಲ್ಲಿ ಹೆಚ್ಚು ಯುವಕರು ಮುಂದಾಗಬೇಕಿದೆ ಎಂದು ತಿಳಿಸಿದರು.
ಶಿಕ್ಷಕ ನಾಗರಾಜು ಮಾತನಾಡಿ, 1954ರಲ್ಲಿ ಅಂಬೇಡ್ಕರ್ ಸ್ಥಾಪಿಸಿದಂತಹ ಬೌದ್ಧ ಮಹಾಸಭಾ 69 ವರ್ಷಗಳನ್ನು ಪೂರೈಸಿದೆ. ಆದರೂ ಪ್ರಬುದ್ಧ ಭಾರತದ ಕನಸು ಕನಸಾಗಿಯೇ ಉಳಿದಿದೆ. ಹಾಗಾಗಿ, ಅಂಬೇಡ್ಕರ್ ಅವರು ದೇಶದ ಸಮಾನತೆಗಾಗಿ ನೀಡಿದ ಸಂವಿಧಾನವನ್ನು ಪಾಲಿಸುತ್ತಿರುವುದು ಎಷ್ಟು ಮುಖ್ಯವೋ ಅಷ್ಟೇ ಬೌದ್ಧ ಮಹಾಸಭಾ ಆಶಯವನ್ನು ಈಡೇರಿಸುವುದು ಮುಖ್ಯ. ಈ ಬಗ್ಗೆ ಯುವ ಪೀಳಿಗೆ ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲ ಶ್ರೀನಿವಾಸ್, ಮುಖಂಡರಾದ ಶಿವರಾಜು, ಕೃಷ್ಣಯ್ಯ, ನಂಜುಂಡಸ್ವಾಮಿ, ಬಾನುಪ್ರಸಾದ್, ವರುಣ್, ನಾಗರಾಜು, ಪ್ರಕಾಶ್ ಹಾಗೂ ಇನ್ನಿತರರು ಇದ್ದರು.