ಜಿಲ್ಲಾದ್ಯಂತ ಕ್ರಿಸ್‌ಮಸ್ ಸಡಗರ

25chn7
Published on

ಚಾಮರಾಜನಗರ: ಜಿಲ್ಲಾ ಕೇಂದ್ರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಭಾನುವಾರ ಕ್ರೈಸ್ತ ಸಮುದಾಯದವರು ಸಂಭ್ರಮ ಸಡಗರದಿಂದ ಆಚರಿಸಿದರು.

ನಗರದ ಸಿಎಸ್‌ಐ, ಸಂತಪೌಲರ ದೇವಾಲಯ ಹಾಗೂ ಇನ್ನಿತರ ಚರ್ಚ್‌ಗಳಲ್ಲಿ ಭಾನುವಾರ ರಾತ್ರಿ 12 ಗಂಟೆಯ ಬಳಿಕ ಸಾಮೂಹಿಕ ಪ್ರಾರ್ಥನೆ, ಆರಾಧನೆ, ಬಲಿ ಪೂಜೆಗಳು ನಡೆದವು. ಕ್ರಿಶ್ಚಿಯನ್ನರು ಕುಟುಂಬ ಸಮೇತರಾಗಿ ತಮ್ಮ ವ್ಯಾಪ್ತಿಯ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ಪಾಲ್ಗೊಂಡರು. ವಿವಿಧ ಚರ್ಚ್‌ಗಳ ಧರ್ಮಗುರುಗಳು ಆಶೀರ್ವಚನ ನೀಡುವ ಮೂಲಕ ಯೇಸುಕ್ರಿಸ್ತನ ಜೀವನ ಸಂದೇಶವನ್ನು ಸಾರಿದರು. ಕ್ರಿಸ್‌ಮಸ್ ಅಂಗವಾಗಿ ವಿಶೇಷ ಶುಭ ಸಂದೇಶವನ್ನು ನೀಡಿದರು. ಆರಾಧನೆ ಮುಗಿದ ಬಳಿಕ ಎಲ್ಲರೂ ಪರಸ್ಪರ ಕೇಕ್, ಸಿಹಿ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.ನಗರದ ವಿವಿಧ ಚರ್ಚ್‌ಗಳಲ್ಲಿ ಸೋಮವಾರ ಬೆಳಗ್ಗೆಯೂ ವಿಶೇಷ ಪ್ರಾರ್ಥನೆ ನೆರವೇರಿತು. ಯೇಸುವಿನ ಭಜನೆಗಳನ್ನು ಹಾಡಿದ ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಎದ್ದು ಕಾಣುತ್ತಿತ್ತು.

ಮನೆ ಮನೆಗಳಲ್ಲೂ ಸಂಭ್ರಮ:
ನಗರದಲ್ಲಿ ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆ, ಸಮುದಾಯದವರ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಮಕ್ಕಳು, ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಹಿರಿಯರು ಮಕ್ಕಳಿಗೆ ಕ್ರಿಸ್‌ಮಸ್ ಉಡುಗೊರೆಗಳನ್ನು ನೀಡಿದರು. ಮನೆಗೆ ಸ್ನೇಹಿತರು ಹಾಗೂ ಸಂಬಂಧಿಕರನ್ನು ಆಹ್ವಾನಿಸಿ ಸಂಭ್ರಮಿಸಿದರು. ಅತಿಥಿಗಳಿಗೆ ಕ್ರಿಸ್‌ಮಸ್ ಕೇಕ್ ಹಾಗೂ ಇತರ ಸಿಹಿ ತಿಂಡಿಗಳನ್ನು ನೀಡಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಹಲವರು ತಮ್ಮ ಮನೆಯ ಮುಂಭಾಗ ಕ್ರಿಸ್‌ಮಸ್ ಟ್ರೀಗಳನ್ನು ನಿರ್ಮಾಣ ಮಾಡಿದ್ದರು. ಕ್ರೈಸ್ತರು ಮನೆಗಳಲ್ಲಿ ವಿವಿಧ ಬಗೆಯ ದೀಪಾಲಂಕಾರಗಳನ್ನು ಮಾಡಿ ಹಬ್ಬಕ್ಕೆ ಮೆರುಗು ತುಂಬಿದರು.

ಚರ್ಚ್‌ಗಳಿಗೆ ರಾಜಕಾರಣಿಗಳ ಭೇಟಿ:
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಮಾಜದ ಗಣ್ಯರು ಚರ್ಚ್‌ಗಳಿಗೆ ಭೇಟಿ ನೀಡಿ ಶುಭಾಶಯ ಕೋರಿದರು. ಕ್ರಿಶ್ಚಿಯನ್ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಹಬ್ಬದಲ್ಲಿ ಪಾಲ್ಗೊಂಡರು. ನಗರದ ಸಿಎಸ್‌ಐ, ಮಸಗಾಪುರದ ಬಿಷಪ್ ನಾರ್ಚೆಂಟ್ ಸ್ಮಾರಕ ದೇವಲಯ, ದೊಡ್ಡರಾಯ ಪೇಟೆಯ ಸಂತ ತೆರೆಸಾ ಚರ್ಚ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಚರ್ಚ್‌ಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ತೆರಳಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಮಾತನಾಡಿದ ಅವರು, ಶಾಂತಿ, ಅಹಿಂಸೆ, ಕರುಣೆಯಂತಹ ಮಾನವೀಯತೆ ಗುಣಗಳನ್ನು ಯೇಸುಕ್ರಿಸ್ತ ಜಗತ್ತಿಗೆ ಸಾರಿದರು. ಮಹಾನ್ ಮಾನವತಾವಾದಿ ಯೇಸುಕ್ರಿಸ್ತ ಎಲ್ಲರ ಒಲಿತನ್ನು ಬಯಸಿದ್ದರು. 2024 ನೇ ನೂತನ ವರ್ಷವು ನಾಡಿನ ಜನತೆಗೆ ಒಳಿತನ್ನುಂಟುಮಾಡಲಿ, ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ನಾಗವಳ್ಳಿ ಗ್ರಾಮದಲ್ಲಿ ಗೋದಳಿ ನಿರ್ಮಾಣ: ತಾಲೂಕಿನ ನಾಗವಳ್ಳಿ ಗ್ರಾಮದ ಕ್ರಿಸ್ತನ ಪವಿತ್ರ ದೇವಾಲಯದಲ್ಲಿ ಸಂಪ್ರದಾಯ ಬದ್ಧವಾಗಿ ಗೋದಳಿ ನಿರ್ಮಾಣ ಮಾಡುವ ಮೂಲಕ ಶ್ರದ್ಧಾ, ಭಕ್ತಿಯಿಂದ ಕ್ರಿಸ್‌ಮಸ್ ಆಚರಣೆ ಮಾಡಿದರು. ಕ್ರೈಸ್ತರ ಕ್ಯಾಥೋಲಿಕ್ ಪಂಗಡದಲ್ಲಿ ಸುಮಾರು 800 ವರ್ಷಗಳ ಹಿಂದೆ ್ರಾನ್ಸ್ ದೇವಿಯಾರ್ ಮೊಟ್ಟ ಮೊದಲಿಗೆ ಗೋದಳಿ ನಿರ್ಮಾಣ ಮಾಡುವುದನ್ನು ಪ್ರಾರಂಭಿಸಿದರು. ಈ ನಿಟ್ಟಿನಲ್ಲಿ ಮನೆ, ಮನೆಗಳಲ್ಲಿ ಹಾಗೂ ಚರ್ಚ್‌ಗಳಲ್ಲಿ ಗೋದಳಿ ನಿರ್ಮಾಣ ಮಾಡುವ ಮೂಲಕ ಕ್ರಿಸ್ತನ ಸಂದೇಶವನ್ನು ಸಾರಿದರು. ಅದಲ್ಲದೆ ಗ್ರಾವದ ಸವೆಂತ್ ಡೇ ಹಾಗೂ ಬ್ರದರನ್ ಚರ್ಚ್‌ಗಳಲ್ಲೂ ಕ್ರೈಸ್ತರು ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ ಮಾಡುವ ಮೂಲಕ ಜಗದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net