

ಚಾಮರಾಜನಗರ: ಸಚಿವ ಶಿವಾನಂದ ಪಾಟೀಲ್ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದ ಜಮಾಯಿಸಿದ ಪ್ರತಿಭಟನಾಕಾರರು, ಶಿವಾನಂದ ಪಾಟೀಲ್ ವಿರುದ್ಧ ೋಷಣೆ ಕೂಗಿ, ಅವರ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ದೇಶದಾದ್ಯಂತ ವಿಶ್ವ ರೈತ ದಿನಾಚರಣೆಯನ್ನು ಆಚರಿಸಿ, ರೈತ ದೇಶದ ಬೆನ್ನೆಲುಬು ಹಾಗೂ ದೇಶಕ್ಕೆ ಅನ್ನ ನೀಡುವ ಅನ್ನದಾತ ಎಂದು ರಾಜಕಾರಣಿಗಳು ಮಾತನಾಡುತ್ತಾರೆ. ಆದರೆ ಶಿವಾನಂದ ಪಾಟೀಲ್ ರೈತರು ಬರಗಾಲವನ್ನು ಬರಬೇಕೆಂದು ಆಶಿಸುತ್ತಾರೆ, ಏಕೆಂದರೆ ಸಾಲ ಮನ್ನಾ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಲು ಎಂದು ಹೇಳುವ ಮೂಲಕ ರೈತರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಗೊಬ್ಬರದ ಮೇಲೆ ಸಬ್ಸಿಡಿ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಸಾಲ ಮನ್ನಾವನ್ನು ನಿರೀಕ್ಷಿಸುವುದು ಸರಿಯಲ್ಲ ಎನ್ನುವ ಶಿವಾನಂದ ಪಾಟೀಲ್, ರಾಜ್ಯದ ಮುಖ್ಯಮಂತ್ರಿ ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಮಾಡುತ್ತೇವೆಂದು ವಿಧಾನಸೌಧದಲ್ಲಿ ಘೋಷಣೆ ಮಾಡಿದಾಗ ಎಲ್ಲಿ ಹೋಗಿದ್ದರು? ಅಲ್ಲಿ ಎದ್ದು ನಿಂತು ಪ್ರತಿಭಟಿಸಬೇಕಿತ್ತು ಎಂದರು.
ಸಚಿವ ಶಿವಾನಂದ ಪಾಟೀಲ್ ಈ ವಿಚಾರದಲ್ಲಿ ರೈತರ ಕ್ಷಮೆ ಕೇಳಬೇಕು, ಅವರನ್ನು ಮುಖ್ಯಮಂತ್ರಿ ಸಚಿವ ಸಂಪುಟದಿಂದ ವಜಾ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಹಾಲಿನ ನಾಗರಾಜು, ಮಲೆಯೂರು ಹರ್ಷ, ಎಳನೀರು ಮಹೇಂದ್ರ, ಸತೀಶ್, ಅರಳಿಕಟ್ಟೆ ಕುಮಾರ್, ಪ್ರಭುಸ್ವಾಮಿ, ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಮಹದೇವಸ್ವಾಮಿ, ಗುರು, ನಾಗೇಂದ್ರ, ನಂದೀಶ್, ಶ್ರೀಕಂಠ, ನಾಗರಾಜು, ಮಹದೇವಪ್ಪ, ಸಿದ್ದಪ್ಪ ಹಾಗೂ ಇತರರು ಭಾಗವಹಿಸಿದ್ದರು.