ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ ಎನ್‌ಸಿಸಿ ಸಹಕಾರಿ

22chn5
Published on

ಚಾಮರಾಜನಗರ: ಶಿಸ್ತುಬದ್ಧ ಜೀವನ, ಸಂಯಮದ ನಡೆ ಮತ್ತು ಒಗ್ಗಟ್ಟನ್ನು ಕಳುಹಿಸಿಕೊಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಬೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಮಂಜುನಾಥ್ ಹೇಳಿದರು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 7ನೇ ಎನ್‌ಸಿಸಿ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ ಮತ್ತು ನಾಯಕತ್ವ ಗುಣ ಬಹಳ ಮುಖ್ಯವಾಗಿದೆ. ಅದರಲ್ಲೂ ವೈದ್ಯಕೀಯ ವಿದ್ಯಾರ್ಥಿಗಳು ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ತಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ನಾನು ಕೂಡ ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಯಾಗಿದ್ದರಿಂದ ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಎನ್‌ಸಿಸಿಯಿಂದ ಉದ್ಯೋಗ ಅವಕಾಶಗಳು ಬೇಗ ದೊರೆಯುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಮಹೇಶ್ವರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ, ದೇಶಭಕ್ತಿ ಹಾಗೂ ಆರೋಗ್ಯವಂತ ಜೀವನವನ್ನು ರೂಪಿಸಲು ಎನ್‌ಸಿಸಿ ಸಹಕಾರಿಯಾಗಿದೆ. ಭಾರತೀಯ ಸೈನ್ಯದ ವೈದ್ಯಕೀಯ ವಿಭಾಗದಲ್ಲಿ ಸಾಕಷ್ಟು ಉದ್ಯೋಗಳು ಸೃಷ್ಟಿಯಾಗುತ್ತದೆ. ಅದನ್ನು ಪಡೆದುಕೊಳ್ಳುವುದು ಸಾಕಷ್ಟು ಜನರ ಕನಸಾಗಿರುತ್ತದೆ. ಇಂತಹ ಕನಸುಗಳನ್ನು ನನಸಾಗಿಸುವಲ್ಲಿ ಎನ್‌ಸಿಸಿ ಅನುಕೂಲಕಾರಿಯಾಗಿದೆ ಎಂದರು.

ಕೀಳು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಹಾಗೂ ಎನ್‌ಸಿಸಿ ಅಧಿಕಾರಿ ಡಾ.ಮಾರುತಿ ಮಾತನಾಡಿ, ಸಮಾಜದಲ್ಲಿ ತೊಂದರೆ ಆದಾಗ ತುರ್ತು ಚಿಕಿತ್ಸೆ ನೀಡಲು, ತುರ್ತು ಪರಿಸ್ಥಿತಿಯಲ್ಲಿ ರಕ್ತದಾನ ಮಾಡಲು, ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಎನ್‌ಸಿಸಿ ವಿದ್ಯಾರ್ಥಿಗಳು ಶ್ರಮಿಸಬೇಕು. ಈ ಮೂಲಕ ಸಹಕಾರ ಮನೋಭಾವ, ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂಗರಚನಾ ಶಾಸ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಂಶುಪಾಲ ಡಾ.ಗಿರೀಶ್ ಪಾಟೀಲ್, ಸೀ ರೋಗ ತಜ್ಞ ಡಾ.ಪ್ರದೀಪ್, ಹಿರಿಯ ಎನ್‌ಸಿಸಿ ಅಧಿಕಾರಿ ಪಿ.ಲೋಲಾಕ್ಷಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net