ಸಂಸತ್ ಸದಸ್ಯರ ಅಮಾನತು ಖಂಡಿಸಿ ಪ್ರತಿಭಟನೆ

22chn3
Published on

ಚಾಮರಾಜನಗರ: ಲೋಕಸಭೆಯಲ್ಲಿ ವಿಪಕ್ಷದ ಸಂಸತ್ ಸದಸ್ಯರನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಕಳೆದ ಕೆಲ ದಿನಗಳ ಹಿಂದೆ ಸಂಸತ್ ಭವನದಲ್ಲಿ ನಡೆದ ಬಣ್ಣದ ಹೊಗೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಲೋಪದ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಲೋಕಸಭಾ ಸ್ಪೀಕರ್ ಅವರು ಕಾಂಗ್ರೆಸ್ ಸಂಸದರು ಸೇರಿದಂತೆ 140 ಕ್ಕಿಂತಲೂ ಹೆಚ್ಚು ವಿರೋಧ ಪಕ್ಷದ ಸದಸ್ಯರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ವಿರುದ್ಧ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಬಿಜೆಪಿ ಮುಖಂಡರು ಸಂವಿಧಾನದ ಮೇಲೆ ಗೌರವವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಸಾರ್ವಜನಿಕ ಸಂಸ್ಥೆಗಳು ಹಾಗೂ ಲೋಕಸಭಾ ಸ್ಪೀಕರ್ ಅವರನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ತಾವು ಹೇಳಿದ್ದೆ ಕಾನೂನು ಅಂತ ಹೇಳಿ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವದ ದೇಗುಲವಾಗಿರುವ ಸಂಸತ್ ಭವನದಲ್ಲಿ ಭದ್ರತಾ ಲೋಪ ಆಗಿರುವುದನ್ನು ಪ್ರಶ್ನಿಸಿದ 141 ಸಂಸದರನ್ನು ಅಮಾನತು ಮಾಡಿದ್ದಾರೆ. ಈ ಸಂಸತ್ ಅಧಿವೇಶನವನ್ನು ಯಾವ ಪುರಷಾರ್ಥಕ್ಕೆ ನಡೆಸಬೇಕು. ದೇಶದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಅಮಾನತು ಮಾಡಿರುವುದು ಇದೇ ಮೊದಲಾಗಿದೆ. ಇದೇ ರೀತಿಯಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಚಳುವಳಿ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಮಹದೇವ್, ಚಿಕ್ಕಮಾದು, ಜಿ.ಪಂ ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ಕೆ.ಪಿ.ಸದಾಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಅಸ್ಗರ್ ಮುನ್ನಾ, ಗುರುಸ್ವಾಮಿ, ನಗರಸಭಾ ಸದಸ್ಯರಾದ ಆರ್.ಪಿ.ನಂಜುಂಡಸ್ವಾಮಿ, ಚಿನ್ನಮ್ಮ, ಕವಿತಾ, ಸಿ.ಎ.ಮಹದೇವಶೆಟ್ಟಿ, ಮಹದೇವಯ್ಯ, ಎನ್‌ಎಸ್ಯುಐ ಜಿಲ್ಲಾಧ್ಯಕ್ಷ ಮೋಹನ್(ನಗು) ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net