

ಚಾಮರಾಜನಗರ: ಸವಿತಾ ಸಮುದಾಯದವರು ನಾಗರಿಕತೆಯ ನಾಯಕರು ಎಂದು ಧಾರವಾಡ ಜಿಲ್ಲೆಯ ಪ್ರೊ.ವೆಂಕಟಾಚಲಪತಿ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಸವಿತಾ ಮಹರ್ಷಿಗಳು ದೇವಾನುದೇವತೆಗಳಿಗೆ ಕ್ಷೌರ ಮಾಡಿದಂತವರು. ಕ್ಷೌರಿಕ ವೃತ್ತಿ ಪುರಾತನವಾದ ವೃತ್ತಿಯಾಗಿದ್ದು, ದೇಶದ ಇತಿಹಾಸಕ್ಕೂ ಮುನ್ನವೇ ಇದ್ದಂತಹ ವೃತ್ತಿ ಇದಾಗಿದೆ. ಮನುಷ್ಯನನ್ನು ನಾಗರೀಕನನ್ನಾಗಿಸುವಲ್ಲಿ ಸಮಾಜದ ಕೊಡುಗೆ ಅಪಾರವಾಗಿದೆ. ಪ್ರಸ್ತುತ ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದ್ದು. ನಮ್ಮ ಸಮುದಾಯವನ್ನು ಒಗ್ಗೂಡಿಸುವಲ್ಲಿ ಸವಿತಾ ಮಹರ್ಷಿ ಜಯಂತಿ ಆಯೋಜಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದರು.
ಸವಿತಾ ಎಂಬ ಪದ ಪ್ರಚೋದಕ ಶಕ್ತಿಯಾಗಿದೆ. ಸವಿತಾ ಮಹರ್ಷಿ ಸೂರ್ಯನ ಅವತಾರವಾಗಿದೆ. ಸೂರ್ಯ ಪ್ರಪಂಚಕ್ಕೆ ಎಷ್ಟು ಮುಖ್ಯವೋ, ಸವಿತಾ ಸಮಾಜದ ವೃತ್ತಿಗಳು ಅಷ್ಟೇ ಮುಖ್ಯ. ಯಾವುದೇ ಶುಭಕಾರ್ಯಗಳಿಗೆ ಸಮಾಜದವರು ಇರಲೇ ಬೇಕು. ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೂ ಸಹಾಯವಾಗುವ ವೃತ್ತಿ ಯಾವುದಾದರೂ ಇದ್ದರೆ ಅದು ಸವಿತಾ ಸಮಾಜದ ವೃತ್ತಿಯಾಗಿದೆ. ಕೆಲವು ಹಳ್ಳಿಗಳಲ್ಲಿ ಅಸ್ಪೃಶ್ಯತೆ, ಜಾತಿ ನಿಂದನೆಯಿಂದ ಸಮಾಜದವರು ಬಸವಳಿದಿದ್ದಾರೆ. ನಮ್ಮ ವೃತ್ತಿಯ ಬಗ್ಗೆ ಹೆಮ್ಮೆ ಇರಲಿ. ಸಮುದಾಯದ ನೌಕರರು ಒಗ್ಗಟ್ಟಾಗಬೇಕು ಯುವಕರು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.
ನಾವು ಸೂಕ್ಷ್ಮ್ಮವಾಗಿ ಆಯುಧಗಳನ್ನು ಉಪಯೋಗಿಸಲು ಪ್ರವೀಣರಾಗಿದ್ದೇವೆ. ನಮ್ಮ ಜನಾಂಗವನ್ನೂ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ ಬಸವಣ್ಣನವರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣನವರ ವಚನಗಳು ನಮಗೆ ಆದರ್ಶವಾಗಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.
ನಗರಸಭಾ ಸದಸ್ಯ ಎಚ್.ಎಸ್.ಮಮತಾ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ ನಟರಾಜ್, ಹೆಚ್ಚುವರಿ ತಹಸೀಲ್ದಾರ್ ಸಿದ್ದರಾಜು, ಸಮುದಾಯದ ಮುಖಂಡರಾದ ಚಿನ್ನಸ್ವಾಮಿ, ಬಸವಣ್ಣ, ಕೃಷ್ಣಪ್ಪ, ಸೋಮಣ್ಣ, ಶ್ರೀಕಂಠಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುರುಲಿಂಗಯ್ಯ ಹಾಗೂ ಇತರರು ಉಪಸ್ಥಿತರಿದ್ದರು.