ಸಂಸತ್ ಸದಸ್ಯರ ಅಮಾನತು ಖಂಡಿಸಿ ಪ್ರತಿಭಟನೆ

20chn2
Published on

ಚಾಮರಾಜನಗರ: ಕೇಂದ್ರ ಸರ್ಕಾರ ಸಂಸತ್ ಸದಸ್ಯರನ್ನು ಅಮಾನತು ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ಯೆಗೈದಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರೀಫ್ ಮಾತನಾಡಿ, ಸಂಸತ್ತು ಪ್ರಜಾಪ್ರಭುತ್ವದ ಆತ್ಮವಿದ್ದಂತೆ, ಅಲ್ಲಿ ಅಧಿಕಾರ ಮತ್ತು ಪಕ್ಷದ ಪ್ರಾಮುಖ್ಯತೆ ಎಷ್ಟಿರುತ್ತದೋ ಅಷ್ಟೇ ವಿಪಕ್ಷದ ಅವಶ್ಯಕತೆಯೂ ಮುಖ್ಯವಾಗಿರುತ್ತದೆ. ವಿಪಕ್ಷವಿಲ್ಲದ ಪ್ರಜಾಪ್ರಭುತ್ವ ಆತ್ಮವಿಲ್ಲದ ದೇಹವಿದ್ದಂತೆ. ಕೇಂದ್ರ ಸರ್ಕಾರ ಸುಮಾರು 141 ಜನ ವಿಪಕ್ಷದ ಸಂಸತ್ ಸದಸ್ಯರನ್ನು ಅಂದರೆ ಶೇ. 70 ರಷ್ಟು ವಿರೋಧ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ಅಮಾನತು ಮಾಡಿರುವ ಕ್ರಮ ನಿರಂಕುಶ ಪ್ರಭುತ್ವದ ಪರಮಾವಧಿ ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹತ್ಯೆಗೈದಿದೆ ಎಂದು ಕಿಡಿಕಾರಿದರು.

ದೇಶದ ಅತಿದೊಡ್ಡ ಪಂಚಾಯಿತಿ ಎಂದು ಕರೆಯಲ್ಪಡುವ ಸಂಸತ್ತಿನ ಒಳಗೆ ನಿರಾಯಾಸವಾಗಿ ಅಪರಿಚಿತರು ಪ್ರವೇಶ ಮಾಡಿ ಹೊಗೆ ಬಾಂಬ್ ಸ್ಪೋಟಿಸಿರುವುದು ಕೇಂದ್ರ ಸರ್ಕಾರದ ವೈಫಲ್ಯವಾಗಿದೆ. ಆ ಕುರಿತು ಸಂಸತ್ತಿನಲ್ಲಿ ದೇಶದ ಗೃಹಮಂತ್ರಿ ಉತ್ತರ ನೀಡಬೇಕಾದದ್ದು ಅವರ ಕರ್ತವ್ಯವಾಗಿದೆ. ಆದರೆ ಸರ್ವಾಧಿಕಾರಿ ಧೋರಣೆಯುಳ್ಳ ಈ ಸರ್ಕಾರ ಉತ್ತರ ನೀಡುವ ಬದಲು ಸಂಸತ್‌ನಲ್ಲಿ ಚರ್ಚೆಗೆ ಒತ್ತಾಯಿಸಿದ ವಿಪಕ್ಷದ ಸಂಸದರನ್ನೇ ಅಮಾನತು ಮಾಡುವ ಮೂಲಕ ವಿಪಕ್ಷ ಮತ್ತು ದೇಶದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ. ಇದರಿಂದ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿಯ ವಾತಾರಣ ಸೃಷ್ಟಿಯಾಗಿದೆ ಎಂದರು.

ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ , ಮಹೇಶ್ ಎಂ.ಗಾಳೀಪುರ, ಮೊಹಮ್ಮದ್ ಅಮೀಕ್, ಅಫ್ಸರ್ ಪಾಷಾ, ಸಯ್ಯದ್ ಇರ್ಫಾನ್, ನಯ್ಯಜ್ ಉಲ್ಲಾ, ನಸ್ರುಲ್ಲಾ, ಆರೀಫ್, ಎಂ.ಎಸ್.ಆರ್.ರಫೀ, ದಲಿತ ಮುಖಂಡ ಸಂಘಸೇನಾ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net