

ಚಾಮರಾಜನಗರ: ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನವನ್ನು ಡಿ.23 ಮತ್ತು 24 ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ ಎಂದು ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಗೀತಾಮಹದೇವಪ್ರಸಾದ್ ಮಾಹಿತಿ ನೀಡಿದರು.
ವೀರಶೈವ-ಲಿಂಗಾಯತರನ್ನು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಂಘಟಿಸುವ ಉದ್ದೇಶದಿಂದ 24ನೇ ಮಹಾ ಅಧಿವೇಶನವನ್ನು ದಾವಣಗೆರೆಯಲ್ಲಿ ಆಯೋಜನೆ ಮಾಡಲಾಗಿದ್ದು, ಸುತ್ತೂರು ಶ್ರೀಗಳು ಅಧಿವೇಶನವನ್ನು ಉದ್ಘಾಟನೆ ಮಾಡಲಿದ್ದಾರೆ. ಅದಲ್ಲದೇ ನಾಡಿನ ಹಿರಿಯ ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮಂಗಳವಾರದ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ 31 ಜಿಲ್ಲೆಗಳ ಶರಣ- ಶರಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಅಧಿವೇಶನದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಐದು ತಾಲೂಕುಗಳಿಂದ ಬಸ್ ಹಾಗೂ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲಿದ್ದಾರೆ. ಮಹಿಳೆಯರಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಮಹಿಳಾ ಸಮಾವೇಶ ಆಯೋಜನೆ ಮಾಡಲಾಗಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಈ ಸಮಾವೇಶದಲ್ಲಿ ಪ್ರಮುಖವಾಗಿ ಸಮುದಾಯದ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಯಲಿದ್ದು, ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವುದು. ಕಾಂತರಾಜು ಆಯೋಗ ವೈಜ್ಞಾನಿಕವಾಗಿ ಮತ್ತೊಮ್ಮೆ ಸಮೀಕ್ಷೆ ಮಾಡಲು ಒತ್ತಾಯಿಸುವುದು ಸೇರಿದಂತೆ ಅನೇಕ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನಾಗೇಂದ್ರ, ತಾಲೂಕು ಅಧ್ಯಕ್ಷ ಹೊಸೂರು ನಟೇಶ್, ಜಿಲ್ಲಾ ನಿರ್ದೇಶಕ ಕಾಡಹಳ್ಳಿ ಮಧು, ಪ್ರಮೋದ್ ಹಾಜರಿದ್ದರು.