ನಿಸ್ವಾರ್ಥ ಸೇವೆ ಮಾಡುವವರಿಂದ ವೈದ್ಯಕೀಯ ಕ್ಷೇತ್ರ ಆಯ್ಕೆ

20raju2
Published on

ಚಾಮರಾಜನಗರ: ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರು ಮಾತ್ರ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಕೃಷ್ಣಪ್ರಸಾದ್ ಸಲಹೆ ನೀಡಿದರು.

ನಗರದ ವಾಲ್ಮೀಕಿ ಭವನದಲ್ಲಿ ಮನೋನಿಧಿ ಚಾರಿಟಬಲ್ ಟ್ರಸ್ಟ್ ಹಾಗೂ ಮನೋನಿಧಿ ನರ್ಸಿಂಗ್ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ 20ನೇ ವರ್ಷದ ಜಿಎನ್‌ಎಂ, ಬಿಎಸ್ಸಿ ನರ್ಸಿಂಗ್ 11ನೇ ಬ್ಯಾಚ್ ವಿದ್ಯಾರ್ಥಿಗಳ ಜ್ಯೋತಿ ಬೆಳಗುವಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಶೇ.90 ರಷ್ಟು ಪಾಲಕರು ತಮ್ಮ ಮಕ್ಕಳು ವೈದ್ಯರಾಗಬೇಕು ಎಂಬ ಕನಸು ಕಾಣುತ್ತಾರೆ. ಸ್ವ ಇಚ್ಛೆಯಿಂದ ಕೆಲವರು ಮಾತ್ರ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಲವರು ಪಾಲಕರ ಒತ್ತಾಯದಿಂದ ಬಂದಿರುತ್ತಾರೆ. ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೀರಿ ಅಂದರೆ ಸಮಾಜ ಸೇವೆ ಮಾಡಲು ದೇವರೇ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರ್ಥ. ಯಾವುದೇ ಸಂಸ್ಥೆಯನ್ನು ಕಟ್ಟಿ ಬೆಳೆಸುವಂತದ್ದು ಸುಲಭದ ಮಾತಲ್ಲ. ಮನೋನಿಧಿ ಸಂಸ್ಥೆ ಸುದೀರ್ಘವಾದ ವಿದ್ಯಾ ದಾನವನ್ನು ಮಾಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ನರ್ಸಿಂಗ್ ತರಬೇತಿಗೆ ಸೇರಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದರು. ಆದರೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ನರ್ಸಿಂಗ್ ತರಬೇತಿ ಮಾಡುತ್ತಿದ್ದಾರೆ. ನಿಸ್ವಾರ್ಥವಾಗಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡವಲ್ಲಿ ದಾದಿಯರ ಸೇವೆ ಅಪಾರವಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಜವಾಬ್ದಾರಿ ಬಹುಮುಖ್ಯವಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ಸಾಂತ್ವನ ಮತ್ತು ಧೈರ್ಯವನ್ನು ತುಂಬಬೇಕಾಗುತ್ತದೆ. ಇತ್ತೀಚಿನ ಯುವ ಪೀಳಿಗೆಯಲ್ಲಿ ತಾಳ್ಮೆ ಕಡಿಮೆಯಾಗಿದೆ. ಉತ್ತಮವಾದ ಗುರಿಯನ್ನು ಹಾಕಿಕೊಂಡು, ಉನ್ನತ ಮಟ್ಟಕ್ಕೆ ಹೋಗಿ. ನರ್ಸಿಂಗ್ ತರಬೇತಿಯ ನಂತರ ಹೆಚ್ಚಿನ ಅವಕಾಶಗಳು ಇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಗಿ ಎಂದರು.

ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಡಾ.ಎನ್.ರೇಣುಕಾದೇವಿ ಮಾತನಾಡಿ, ಸಮಾಜದಲ್ಲಿ ಶುಶ್ರೂಷಕರ ಸೇವೆಗೆ ಬಹುದೊಡ್ಡ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ಪಾಲಕರು ಕೂಡ ಮಕ್ಕಳನ್ನು ನರ್ಸಿಂಗ್ ಕಡೆ ಹೋಗಲು ಪ್ರೋತ್ಸಾಹಿಸುತ್ತಿದ್ದಾರೆ. ರೋಗಿಯ ಸೇವೆಯಲ್ಲಿ ವೈದ್ಯರಿಗಿಂತಲೂ ಶುಶ್ರೂಷಕರು ಹೆಚ್ಚಿನ ಮಹತ್ವ ಪಡೆದಿದ್ದು, ನಿಮ್ಮ ನಿಸ್ವಾರ್ಥ ಸೇವೆಯಿಂದ ರೋಗಿಗಳು ಮರುಜನ್ಮ ಪಡೆದುಕೊಳ್ಳುತ್ತಾರೆ. ನಗು ಮುಖದಿಂದ ಜನರ ಸೇವೆ ಮಾಡುವುದರಿಂದ ನಿಮ್ಮ ವೃತ್ತಿಗೆ ಮತ್ತಷ್ಟು ಮೆರುಗು ಬರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನರ್ಸಿಂಗ್ ಸೂಪರಿಂಟೆಂಡೆಂಟ್ ಎನ್.ಗೀತಾ, ಮೈಸೂರು ಸರ್ಕಾರಿ ನರ್ಸಿಂಗ್ ಕಾಲೇಜಿನ ಸಮುದಾಯ ಆರೋಗ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ. ನಂದಪ್ರಸಾದ್, ಮನೋನಿಧಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಲ್ಬರ್ಟ್ ಮನೋಹರ್, ಕಾರ್ಯದರ್ಶಿ ಡಾ.ಶೈಲಜಾ ಕೃಪಾನಿಧಿ, ಪ್ರಾಂಶುಪಾಲ ಸಿಬಿನ್ ಸಿ.ವರ್ಗೀಸ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net