

ಚಾಮರಾಜನಗರ: ಮಾದಿಗ ಮುನ್ನಡೆ ಹೆಸರಿನಲ್ಲಿ ಡಿ.21ರಂದು ನಗರದಲ್ಲಿ ಜಿಲ್ಲಾಮಟ್ಟದ ಆತ್ಮಗೌರವ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ತಿಳಿಸಿದರು.
ಮಾದಿಗರ ಸಮಾಜಕ್ಕೆ ಒಳ ಮೀಸಲಾತಿ ಕುರಿತು ಮನದಟ್ಟು ಮಾಡಬೇಕಾಗಿದೆ. ಮೀಸಲಾತಿ ಪಡೆಯುವುದು ನಮ್ಮ ಹಕ್ಕು. ಈ ಕುರಿತು ಮಾದಿಗ ಸಮಾಜಕ್ಕೆ ಅರಿವು ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆತ್ಮಗೌರವ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಮಾವೇಶವು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಹೀಗಾಗಿ ಎಲ್ಲ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಸಮಾವೇಶಕ್ಕೆ ಮಾದಾರ ಚೆನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದಕಾರಜೋಳ, ವಿಧಾನ ಪರಿಷತ್ತಿನ ಸದಸ್ಯರಾದ ಸಿ.ರಮೇಶ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್‌ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಈ ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಮಾಜದ ಮುಖಂಡರು, ಯಜಮಾನರು, ಗ್ರಾಮಸ್ಥರು ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಎಲ್ಲರೂ ಒಗ್ಗೂಡಬೇಕಾಗಿದೆ. ನಮ್ಮ ಹಕ್ಕನ್ನು ನಾವು ಪಡೆಯಲೇಬೇಕು ಎಂದು ಹೇಳಿದರು.
2012ರಲ್ಲಿ ಸರ್ವೆ ಮಾಡಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಿದ್ಧಪಡಿಸಲಾಯಿತು. 2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಹುಬ್ಬಳ್ಳಿಗೆ ಕರೆಸಿ 5 ಲಕ್ಷ ಜನರನ್ನು ಸೇರಿಸಿದ್ದೆವು. ಈ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುತ್ತಾರೆಂದು ಭಾವಿಸಿದ್ದೆವು. ಆದರೆ ಅವರು ಪರಿಶೀಲನೆ ಮಾಡುವುದಾಗಿ ಹೇಳಿ ನುಣುಚಿಕೊಂಡರು ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಬಸವನಪುರ ರಾಜಶೇಖರ್, ಎಸ್.ಬಸವರಾಜು, ಪುರಸಭೆ ಮಾಜಿ ಸದಸ್ಯ ಹಸುಗೂಲಿ ಸಿದ್ದಯ್ಯ, ಕೆಸ್ತೂರು ಮರಪ್ಪ, ಎಂ.ಶಿವಕುಮಾರ್, ಎಂ.ರಾಜು ಮತ್ತು ಇತರರು ಇದ್ದರು.