

ಚಾಮರಾಜನಗರ: ನನ್ನ ಬಳಿಗೆ ಪ್ರತಿದಿನ ಉದ್ಯೋಗ ಕೇಳಿಕೊಂಡು ಜನರು ಬರುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಶಕ್ತಿ ಕೈಗಾರಿಕೋದ್ಯಮಿಗಳಿಗೆ ಇದ್ದು, ಜಿಲ್ಲೆಯ ಯುವಜನರಿಗೆ ಉದ್ಯೋಗ ನೀಡಿ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.
ನಗರದ ಖಾಸಗಿ ರೆಸಾರ್ಟ್‌ನ ಸಭಾಂಗಣದಲ್ಲಿ ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾಸಿಯಾ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಮತ್ತು ಹಣಕಾಸಿನ ನೆರವು, ರ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರ ಕೃಷಿ ಪ್ರಧಾನ ಜಿಲ್ಲೆ. ಶೇ.50ರಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಬೆಂಗಳೂರು , ಮೈಸೂರು, ರಾಮನಗರ ಜಿಲ್ಲೆಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಚಾಮರಾಜನಗರ ಬೇರೆ ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತಿದ್ದರೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಲೇಬೇಕಾಗಿದೆ. ಬದನಗುಪ್ಪೆ-ಕೆಲ್ಲಂಬಳ್ಳಿ ಪ್ರದೇಶದಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗಿದೆ ಎಂದರು.
ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ಮಾತನಾಡಿ, ಕೈಗಾರಿಕೆಗಳಿಗೆ ಸಿಗುವ ಸವಲತ್ತನ್ನು ಬಳಸಿಕೊಳ್ಳುವುದರಲ್ಲಿ ಕರ್ನಾಟಕ ಹಿಂದುಳಿದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಕಡಿಮೆ ಸೌಲಭ್ಯವನ್ನು ಪಡೆದುಕೊಂಡಿದೆ ಎಂದು ಹೇಳಿದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಿಗುವ ಸಲವಲತ್ತುಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಿಗುವ ಸೌಲಭ್ಯಗಳ ಕುರಿತು ತಿಳಿಸಿಕೊಡಲು ಕಾರ್ಯಕ್ರಮ ಆಯೋಜಿಸಿದರೆ ದಕ್ಷಿಣ ಕರ್ನಾಟಕದ ಕಡೆ ಭಾಗವಹಿಸುವ ಜನರ ಸಂಖ್ಯೆ ಕಡಿಮೆ ಇದೆ. ಸೌಲಭ್ಯಗಳ ಬಗ್ಗೆ ತಿಳಿಯದೆ ಇರುವ ಕಾರಣಕ್ಕೆ ಉಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಕೊನೆಗೆ ಬ್ಯಾಂಕ್ ಸಾಲ ನೀಡುತ್ತಿಲ್ಲ ಎಂಬ ಆರೋಪ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಕೈಗಾರಿಕೋದ್ಯಮಿಗಳು ಪ್ರಶ್ನೆಗಳನ್ನು ಕೇಳಿ ಗೊಂದಲಗಳನ್ನು ಬಗೆಹರಿಸಿಕೊಂಡರು. ಚಾಮರಾಜನಗರ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಅಧ್ಯಕ್ಷ ಎ.ಜಯಸಿಂಹ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಸನ್ಮಾನಿಸಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎನ್.ನಂಜುಂಡ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ, ಜಿಲ್ಲಾ ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ರಾಜೇಂದ್ರಪ್ರಸಾದ್, ವಿ.ಟಿ.ಸಿಸಿ ಉಪ ನಿರ್ದೇಶಕ ಮನ್ಸೂರ್ ಮತ್ತು ಇತರರು ಉಪಸ್ಥಿತರಿದ್ದರು.