ಸಾಮೂಹಿಕ ಷಷ್ಠಿ ಪೂಜೆ ಕಾರ್ಯಕ್ರಮ

16chn4 (1)
Published on

ಚಾಮರಾಜನಗರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತೆರಕಣಾಂಬಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅರಕಲವಾಡಿ ವಲಯದಿಂದ ತಾಲೂಕಿನ ಅರಕಲವಾಡಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಶನಿವಾರ ಸಾಮೂಹಿಕ ಷಷ್ಠಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಮೈಸೂರಿನ ಶ್ರೀಗಂಧ ಸಾಹಿತ್ಯ ಕಲಾ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ನಾಟಕ ಭಾರ್ಗವ ಕೆಂಪರಾಜು ಮಾತನಾಡಿ, ಧರ್ಮಾಚರಣೆಯಿಂದ ವಿಮುಖರಾಗುತ್ತಿರುವ ಮಕ್ಕಳನ್ನು ಅಧ್ಯಾತ್ಮಿಕ ಚಿಂತನೆಯತ್ತ ಮೈಗೂಡಿಸುವ ಜವಾಬ್ದಾರಿಯನ್ನು ಪೋಷಕರು ಹೊರಬೇಕು ಎಂದು ಸಲಹೆ ನೀಡಿದರು.

ಇಂದಿನ ಮಕ್ಕಳಲ್ಲಿ ಆಧ್ಯಾತ್ಮಿಕ ಚಿಂತನೆ ಮರೆಯಾಗಿದೆ. ಆಚಾರ ವಿಚಾರಗಳನ್ನು ಮರೆತಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಹಿರಿಯರು, ಮುಖಂಡರು ಒಗ್ಗೂಡಿ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸುವ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.

ಸರ್ಕಾರ ನೀಡುವ ಉಚಿತ ಯೋಜನೆಗಳು ಜನರನ್ನು ಸೋಮಾರಿತನಕ್ಕೆ ದೂಡುತ್ತದೆ. ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸರ್ಕಾರ ನಿರ್ವಹಿಸುವ ಕೆಲಸವನ್ನು ಧರ್ಮಸ್ಥಳ ದ ಪೂಜ್ಯರು ಸಂಘ ಸಂಸ್ಥೆಗಳನ್ನು ತೆರೆದು ಬಡಜನರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಹೇಳಿದರು. ದೇವಸ್ಥಾನ ಗಳು ನಿಶ್ಯಬ್ದದಿಂದ ಕೂಡಿರಬೇಕು. ಭಕ್ತಿಭಾವ ಹೊರಬರುವಂತಿರಬೇಕು. ಪ್ರತಿಯೊಬ್ಬರು ಧರ್ಮಾಚರಣೆಗೆ ಮುಂದಾಗಬೇಕು ಎಂದ ಅವರು, ಮಾಡಬಾರದ ಕೆಲಸ ಮಾಡಿ ದೇವಸ್ಥಾನಕ್ಕೆ ಹೋದರೆ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.

ಹೆಣ್ಣು ಮಕ್ಕಳು ನಮ್ಮ ಸಂಸ್ಕೃತಿ ಆಚರಣೆಗಳನ್ನು ಅನುಸರಿಸಬೇಕು. ಹಣೆಗೆ ಕುಂಕುಮ, ಬಳೆ, ತಾಳಿ, ಕಾಲುಂಗುರ ಇವುಗಳ ಮಹತ್ವ ಅರಿತು ಬಾಳುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ದುರಾಸೆ ಇದ್ದರೆ ಲಕ್ಷ್ಮೀ ಜತೆಗಿರುವುದಿಲ್ಲ. ಯೋಚನೆ ಬದಿಗಿಟ್ಟು ಮನಸ್ಸನ್ನು ಪ್ರಪುಳತೆಯಿಂದ ಇರಿಸಿಕೊಳ್ಳಬೇಕು. ಚಿಂತೆ ಮಾಡಿದಷ್ಟು ಹೃದಯಕ್ಕೆ ಆಘಾತವಾಗುತ್ತದೆ. ದೇಹಕ್ಕೆ ಚಿಕಿತ್ಸೆ ಕೊಟ್ಟಷ್ಟು ರೋಗ ಹೆಚ್ಚುತ್ತದೆ ಆದ್ದರಿಂದ ಗುರು ಹಿರಿರನ್ನು ಗೌರವಿಸಿ ಧರ್ಮದ ಆಚರಣೆಗೆ ಮುಂದಾಗಬೇಕು ಎಂದರು.

ಯೋಜನೆ ಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ ಮಾತನಾಡಿ, ಯೋಜನೆಗಳನ್ನು ಪಾರದರ್ಶಕ ವಾಗಿ ಗ್ರಾಮದ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಸಂಘದ ಸದಸ್ಯರು ಯೋಜನೆಗಳ ಬಗ್ಗೆ ಅರಿವು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖಂಡ ಪಿ. ಮಹೇಶ್ ಮಾತನಾಡಿ, ಮಹಿಳಾ ಸದಸ್ಯರು ಇಂದು ವ್ಯವಹಾರ ಜ್ಞಾನ ಹೊಂದಿದ್ದಾರೆ. ಜೀವನ ಮಟ್ಟ ಸುಧಾರಣೆಗೆ ಸಂಘಗಳು ಸಹಕಾರಿ ಆಗಿವೆ. ಸಾಲದ ರೂಪದಲ್ಲಿ ನೀಡುವ ಹಣವನ್ನು ಐಶಾರಾಮಿ ಬದುಕಿಗೆ ವ್ಯವಹರಿಸದೆ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ವಿನಿಯೋಗಿಸಬೇಕು’ ಎಂದು ಸಲಹೆ ನೀಡಿದರು.

ಸಿದ್ಧಮಲ್ಲೇಶ್ವರ ಮಠದ ಚಿಕ್ಕಬುದ್ದಿ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.
ಅರಕಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಣಮ್ಮ, ಹೊನ್ನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲೇಶ್, ಅಮಚವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತೇಜಸ್ವಿ, ಮುಖಂಡರಾದ ಗುರುಸ್ವಾಮಿ, ಡಿ.ಗುರುಮಲ್ಲಪ್ಪ, ಡೈರಿ ಪ್ರಕಾಶ್, ಅರಕಲವಾಡಿ ವಲಯದ ಮೇಲ್ವಿಚಾರಕ ಶರತ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net