ರಂಗಭೂಮಿ ಕಲೆ ಜೀವಂತ ಕಲೆಯಾಗಿದೆ

14chn11
Published on

ಚಾಮರಾಜನಗರ: ಸಮಾಜದಲ್ಲಿ ಮೊಟ್ಟಮೊದಲಿಗೆ ಮನರಂಜನೆ ಪ್ರಾರಂಭವಾಗಿದ್ದೆ ನಾಟಕಗಳಿಂದ ಎಂದು ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಟ ಎಸ್.ನಾರಾಯಣ್ ತಿಳಿಸಿದರು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾಮಂಟಪ ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜೆಎಸ್‌ಎಸ್ ರಂಗೋತ್ಸವ-2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಾಮರಾಜನಗರಕ್ಕೆ ಬಂದಾಗಲೆಲ್ಲಾ ವರನಟ ಡಾ.ರಾಜ್ಕುಮಾರ್ ಅವರ ನೆನಪು ತುಂಬಾ ಕಾಡುತ್ತದೆ. ಕಲೆಯನ್ನು ಅವರು ಪ್ರೀತಿಸಿ ಅಪ್ಪಿಕೊಂಡಷ್ಟು, ಈ ವರೆಗೂ ಯಾರು ಪ್ರೀತಿಸಲು ಸಾಧ್ಯವಾಗಿಲ್ಲ. ಸಮಾಜದಲ್ಲಿ ನಾಟಕ ಮಾಡುವ ಜನರು ತುಂಬಾ ಇರುತ್ತಾರೆ, ಆದರೆ ಅದನ್ನು ಕಲಿಯುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ನಾಟಕ ಕಲೆ ಜೀವಕಲೆಯಾಗಿದ್ದು, ಬದುಕಿನಲ್ಲಿ ಶಿಸ್ತು, ಸಂಯಮವನ್ನು ಕಲಿಸಿಕೊಡುತ್ತದೆ ಎಂದರು.

ಸಮಾಜದಲ್ಲಿ ನಾಟಕಗಳಿಂದಲೇ ಮನರಂಜನೆ ಮೊದಲು ಆರಂಭವಾಯಿತು. ಈ ಮೂಲಕ ನಾಟಕಗಳು ಹೆಚ್ಚಾಗಿ ಜನರಿಗೆ ತಲುಪುವಂತಾಯಿತು. ನಾಟಕೋತ್ಸವದ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಚಿತ್ರರಂಗಕ್ಕೆ ಬರುವಂತಾಗಲಿ. ಮಕ್ಕಳಿಗಾಗಿಯೇ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ಇತರರು ಉಪಸ್ಥಿತರಿದ್ದರು.

ರಂಗಭೂಮಿಯಿಂದ ಶಿಸ್ತುಬದ್ಧ ಜೀವನ:
ಪ್ರತಿಯೊಬ್ಬ ಮಗುವಿನಲ್ಲೂ ತನ್ನದೇ ಆದ ಪ್ರತಿಭೆ ಅಡಕವಾಗಿರುತ್ತದೆ. ಮಕ್ಕಳ ಪ್ರತಿಭೆ ವಿಕಾಸಕ್ಕೆ ಹಾಗೂ ಶಿಸ್ತುಬದ್ಧ ಜೀವನಕ್ಕೆ ರಂಗಭೂಮಿ ಸಹಕಾರಿಯಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ಸುಮಾರು 60 ವರ್ಷಗಳ ಹಿಂದೆ ಜೆಎಸ್‌ಎಸ್ ಕಲಾಮಂಟಪ ಪ್ರಾರಂಭವಾಗಿದ್ದು, ಅನೇಕ ಸಾಮಾಜಿಕ, ಐತಿಹಾಸಿಕ, ಧಾರ್ಮಿಕ ನಾಟಕಗಳನ್ನು ಅಭಿನಯಿಸಲಾಗಿದೆ. ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ನಾಟಕೋತ್ಸವವನ್ನು ಆಯೋಜನೆ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳು ಪ್ರತಿ ಕ್ಷಣದಲ್ಲೂ ಎಚ್ಚರಿಕೆಯಿಂದ ಇರುವುದನ್ನು ನಾಟಕಗಳು ಕಲಿಸಿಕೊಡುತ್ತದೆ. ಎಲ್ಲಾ ಕಲೆಗಳಲ್ಲೂ ನಾಟಕ ಕಲೆ ಶ್ರೇಷ್ಠವಾಗಿದೆ. ಇದು ಮನರಂಜನೆ ಮಾತ್ರವಲ್ಲದೆ, ನೈತಿಕ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ನಾಟಕಗಳಲ್ಲಿ ಅನೇಕ ಪ್ರಕಾರಗಳಿದ್ದು, ಅದನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ನಾಟಕ, ರಂಗಭೂಮಿಯಿಂದಲೇ ಜಗತ್ತಿನಲ್ಲಿ ಬಹುದೊಡ್ಡ ಹೆಸರು ಗಳಿಸಿದ್ದ ಡಾ.ರಾಜ್ ಕುಮಾರ್, ನಾಟಕಗಳಿಂದಲೇ ಎಲ್ಲರೂ ಮೆಚ್ಚುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು ಎಂದು ಹೇಳಿದರು.

ಗಮನ ಸೆಳೆದ ಚೆನ್ನಭೈರಾದೇವಿ ನಾಟಕ:
ಪೋರ್ಚುಗೀಸರ ವಿರುದ್ಧ ಹೋರಾಡಿದ ಗೇರುಸೊಪ್ಪಿನ ರಾಣಿ ಚೆನ್ನಭೈರಾದೇವಿ ಹೋರಾಟವನ್ನು ಸಾರುವ ಡಾ.ಗಜಾನನಶರ್ಮ ರಚನೆಯ ಹುಲ್ಲಹಳ್ಳಿಯ ಜೆಎಸ್‌ಎಸ್ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಅಭಿನಯಿಸಿದ ಚೆನ್ನಭೈರಾದೇವಿ ನಾಟಕ ನೋಡುಗರ ಗಮನಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net