

ಚಾಮರಾಜನಗರ: ನಗರಸಭೆ ವ್ಯಾಪ್ತಿಯ ವಿವಿಧ ಅಂಗಡಿಗಳಿಗೆ ಗುರುವಾರ ನಗರಸಭೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಉದ್ದಿಮೆ ಪರವಾನಗಿ ಪರಿಶೀಲನೆ ಮಾಡಿದರು.
ನಗರದ ಡಿವಿಯೇಷನ್ ರಸ್ತೆಯಲ್ಲಿನ ವಿವಿಧ ಕಡೆ ತೆರಳಿದ ಅಧಿಕಾರಿಗಳು ಪ್ರತಿಯೊಂದು ಅಂಗಡಿಗಳಿಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡರಲ್ಲದೇ ನಗರಸಭೆ ವತಿಯಿಂದ ಪಡೆದಿರುವ ಉದ್ದಿಮೆ ಪರವಾನಗಿ ಪಡೆದು ಪರಿಶೀಲಿಸಿದರು.
ಈಗಾಗಲೇ ಅವಧಿ ಮುಗಿದು ನವೀಕರಣ ಮಾಡದಿರುವ ಅಂಗಡಿಗಳಿಗೆ ಸ್ಥಳದಲ್ಲಿಯೇ ನವೀಕರಣ ಮಾಡಲು ದಾಖಲಾತಿ ಗಳನ್ನು ಪಡೆದು ಕಚೇರಿಗೆ ಬಂದು ರಸೀದಿ ಪಡೆಯಲು ಸೂಚಿಸಿದರು . ಅಲ್ಲದೇ ಅಂಗಡಿಗಳು ಮತ್ತು ಹೋಟೆಲ್ ಗಳಲ್ಲಿ ಸ್ವಚ್ಛತೆ, ಆಹಾರ ಗುಣಮಟ್ಟವನ್ನು ಪರಿಶೀಲಿಸಿದ ಅಧಿಕಾರಿಗಳು ಸ್ವಚ್ಛತೆ, ಗುಣಮಟ್ಟ ಇಲ್ಲದ ಅಂಗಡಿಗಳು ಮತ್ತು ಹೋಟೆಲ್ ಗಳಿಗೆ ದಂಡ ವಿಧಿಸಿದರು.
ಡಿವಿಯೇಷನ್ ರಸ್ತೆಯಲ್ಲಿರುವ ಬಟ್ಟೆ ಅಂಗಡಿಗಳು, ಮೊಬೈಲ್ ಅಂಗಡಿಗಳು, ಪಾನೀಪುರಿ ಅಂಗಡಿಗಳು, ಹೋಟೆಲ್‌ಗಳು, ಹಣ್ಣಿನ ಅಂಗಡಿಗಳು, ಚಿಲ್ಲರೆ ಅಂಗಡಿಗಳು, ದಿನಸಿ ಅಂಗಡಿಗಳು, ಮೆಡಿಕಲ್ ಶಾಪ್, ಚಿಕನ್ ಮಟನ್ ಅಂಗಡಿಗಳು, ಸಿಹಿ ತಿನಿಸುಗಳ ಅಂಗಡಿ ಸೇರಿದಂತೆ ಇತರೆ ಅಂಗಡಿಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಈಗಾಗಲೇ ಪಡೆದಿರುವ ಪರವಾನಗಿ ಪಡೆದು ಪರಿಶೀಲಿಸಿತು. ಪರವಾನಗಿ ಪಡೆಯದ ಹಲವು ಅಂಗಡಿಗಳನ್ನು ಮುಚ್ಚಿಸಲಾಯಿತು.
ನಗರಸಭಾ ವ್ಯಾಪ್ತಿಯಲ್ಲಿ ತೆರೆದಿರುವ ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ನಗರಸಭೆ ವತಿಯಿಂದ ಉದ್ದಿಮೆ ಪರವಾನಗಿ ಪಡೆಯಬೇಕು. ಅಲ್ಲದೇ ಪರವಾನಗಿ ಅವಧಿ ಮುಗಿದ ಬಳಿಕ ನವೀಕರಣ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗು ವುದು. ಜೊತೆಗೆ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು,ಆದ್ದರಿಂದ ನಗರಸಭೆಗೆ ವಂಚಿಸದೇ ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳವುದಲ್ಲದೇ ಪರವಾನಗಿ ಪಡೆದುಕೊಂಡು ನ್ಯಾಯಯುತ ವಾಗಿ ವ್ಯಾಪಾರ ವಹಿವಾಟು ಮಾಡಿಸಿಕೊಳ್ಳಬೇಕು ಎಂದು ಪೌರಾಯುಕ್ತ ರಾಮದಾಸ್ ತಿಳಿಸಿದರು.
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಮಾರ್ಕೆಟ್‌ಗೆ ಭೇಟಿ ನೀಡಿದ ಅಧಿಕಾರಿಗಳು ಉದ್ದಿಮೆ ಪರವಾನಗಿ ಪರಿಶೀಲಿಸಿತು. ಆದರೆ, ಉದ್ದಿಮೆ ಪರವಾನಗಿ ಪಡೆದಿರಲಿಲ್ಲ. ಜತೆಗೆ ಅಂಗಡಿಯಲ್ಲಿ ಸ್ವಚ್ಛತೆ ಇಲ್ಲದ ಹಾಗೂ ಕಳಪೆ ಆಹಾರ ಮಾರಾಟ ಮಾಡುತ್ತಿದ್ದ ಪರಿಣಾಮ 5 ಸಾವಿರ ದಂಡ ವಿಧಿಸಿ ಅಂಗಡಿಯನ್ನು ಮುಚ್ಚಿಸಲಾಯಿತು. ಅಲ್ಲದೆ ಬೇಕರಿಯಲ್ಲಿ ಸ್ವಚ್ಛತೆ, ಗುಣಮಟ್ಟ ಇಲ್ಲದ ಕಾರಣ ದಂಡ ವಿಧಿಸಲಾಯಿತು ಮತ್ತು ಅಂಗಡಿ ಮುಚ್ಚಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಅಬ್ರಾರ್ ಅಹಮ್ಮದ್, ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ಸುಧಾ, ಪರಿಸರ ಇಂಜಿನಿಯರ್ ಗಿರಿಜಾ, ಹಿರಿಯ ಆರೋಗ್ಯ ನಿರಿಕ್ಷಕರು ಸುಷ್ಮಾ, ಮಂಜುನಾಥ್, ಆರೋಗ್ಯ ಸಿಬ್ಬಂದಿ ಚೇತನ್, ಮಹೇಶ್, ಮಣಿಕಂಠ ಹಾಜರಿದ್ದರು.