

ಹನೂರು: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹೋಟೆಲ್‌ಗೆ ಸಂಪರ್ಕ ಕಲ್ಪಿಸಿರುವ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಹೊರಹರಿದ ಪರಿಣಾಮ ಪ್ರಯಾಣಿಕರು, ಸಾರ್ವಜನಿಕರು ಸಂಚರಿಸಲು ಸೋಮವಾರ ತೊಂದರೆಪಡುವಂತಾಯಿತು.
ಮಲೆ ಮಹದೇಶ್ವಬೆಟ್ಟದಿಂದ ಸಾರಿಗೆ ಬಸ್‌ನಲ್ಲಿ ಭಕ್ತರು ಹಿಂತಿರುಗುವವರ ಸಂಖ್ಯೆ ಹೆಚ್ಚಾಗಿದ್ದ ಹಿನ್ನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್‌ಗೆ ಆಗಮಿಸುವವರ ಸಂಖ್ಯೆ ಹೆಚ್ಚಿತ್ತು. ಇದರಿಂದ ಹೋಟೆಲ್‌ನಲ್ಲಿ ತಿಂಡಿ, ಊಟ ತಯಾರಿ ಜಾಸ್ತಿಯಾಗಿತ್ತು. ಇದರಿಂದ ಸಮರ್ಪಕ ನಿರ್ವಹಣೆಯಿಲ್ಲದ ಮ್ಯಾನ್‌ಹೋಲ್‌ನಲ್ಲಿ ಕೊಳಚೆ ನೀರು ತುಂಬಿ ಆವರಣದಲ್ಲಿ ಹರಿಯುತ್ತಿತ್ತು. ಪರಿಣಾಮ ಸಾರ್ವಜನಿಕರು ದುರ್ವಾಸನೆಯಿಂದ ತೊಂದರೆ ಅನುಭವಿಸಿದರು. ಆದರೆ ಈ ಬಗ್ಗೆ ಹೋಟೆಲ್‌ನ ಮಾಲೀಕರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಗಮನಹರಿಸದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಜ್ಯದ ರಾಶಿ:
ಜೂ.11 ರಂದು ಶಾಸಕ ಎಂ.ಆರ್ ಮಂಜುನಾಥ್ ಬಸ್ ನಿಲ್ದಾಣದ ಅವರಣವನ್ನು ಪರಿಶೀಲಿಸಿದ ವೇಳೆ ಆವರಣದಲ್ಲಿ ಅಶುಚಿತ್ವ ಕಂಡು ಬಂದಿತ್ತು. ಈ ವೇಳೆ ಹೋಟೆಲ್‌ನ ಮಾಲೀಕ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗೆ ನೈರ್ಮಲ್ಯ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೂ ಯಾವುದೇ ಕ್ರಮವಾಗಿಲ್ಲ. ಹೋಟೆಲ್‌ನ ತ್ಯಾಜ್ಯವನ್ನು ಸಮೀಪದಲ್ಲೇ ಬಿಸಾಡುತ್ತಿದ್ದು, ದನಕರುಗಳು ಆಹಾರ ಅರಸಿ ಬರಯುವುದರಿಂದ ಅಶುಚಿತ್ವ ಮತ್ತಷ್ಟು ಹೆಚ್ಚಾಗಿದ್ದು, ಜತೆಗೆ ರೋಗರುಜಿನಗಳ ಹರಡು ಭೀತಿ ಆವರಿಸಿದೆ. ಇತ್ತ ಕೊಳಚೆ ನೀರು ಹರಿಯುತ್ತಿರುವುದರಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಮ್ಯಾನ್‌ಹೋಲ್ ದುರಸ್ತಿಪಡಿಸಿ, ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.