ಶಿಸ್ತು ಬದ್ಧತೆಯ ವಿದ್ವತ್ ಸಾಧನೆಗೆ ಸಹಕಾರಿ

14chn4
Published on

ಚಾಮರಾಜನಗರ: ನಮ್ಮ ನಡುವೆ ಇರುವ ಪ್ರತಿಭಾವಂತರು ನಮಗೆ ಪ್ರೇರಣೆಯ ಶಕ್ತಿಯಾಗಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮಹದೇವ ಹೇಳಿದರು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವ ವಿದ್ಯಾಲಯದ ನಿಜಗುಣ ಸಭಾಂಗಣದಲ್ಲಿ ರಂಗವಾಹಿನಿ, ಚಾಮರಾಜನಗರ ವಿಶ್ವ ವಿದ್ಯಾಲಯ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಚಾಮರಾಜನಗರ ಬೆಳ್ಳಿ ಸಂಭ್ರಮ ಮತ್ತು ಕನ್ನಡ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ಅನೇಕರು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಪ್ರೊ.ಸಿ.ನಾಗಣ್ಣ ನಿಜಕ್ಕೂ ಪ್ರತಿಭಾವಂತರು ನಮ್ಮ ನಡುವೆ ಇರುವ ಪ್ರೇರಣೆಯ ಶಕ್ತಿಯಾಗಿದ್ದಾರೆ. ಅವರು ಬೇರೆಯವರಿಗೆ ಮೆಟ್ಟಲಾದರೇ ವಿನಃ ಅವರಿಗೆ ಅವಕಾಶಗಳು ಕುಂಠಿತವಾಯಿತು. ಶಿಸ್ತು, ಬದ್ಧತೆ ಮತ್ತು ವಿದ್ವತ್ ಇರುವವರು ಸಾಧನೆಗೆ ಅರ್ಹರಾಗುತ್ತಾರೆ. ಪರಂಪರಾಗತವಾಗಿ ಮೌಲ್ಯಗಳನ್ನು ಜಾಗೃತಿಯಿಂದ ಸಂಪಾದಿಸಬೇಕು. ಪ್ರತಿಯೊಬ್ಬರು ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕು ಎಂದು ಸಲಹೆ ನೀಡಿದರು.

ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ರಂಗವಾಹಿನಿ ಸಂಸ್ಥೆಯಿಂದ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ಜಿಲ್ಲೆಯವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಾಗ ಆ ಸಂತಸವನ್ನು ಹಂಚಿಕೊಳ್ಳುವ ಮಹದಾಸೆಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಪಿ.ಮಾದೇಶ್, ಹಿರಿಯ ಸಾಹಿತಿ ಮತ್ತು ಚಿಂತಕ ಡಾ.ರಾಜಶೇಖರ್ ಜಮದಂಡಿ, ಕನ್ನಡ ವಿಭಾಗದ ಮುಖ್ಯಸ್ಥ ಬಸವಣ್ಣ ಎಸ್.ಮೂಕಹಳ್ಳಿ, ಗುರುರಾಜ್ ಯರಗನಹಳ್ಳಿ ಹಾಗೂ ಇತರರು ಭಾಗವಹಿಸಿದ್ದರು.

ಜಿಲ್ಲೆಯವರು ಹುಟ್ಟುತ್ತಲೇ ಪ್ರತಿಭಾವಂತರಾಗಿದ್ದು, ತಮ್ಮ ಪ್ರತಿಭೆಯನ್ನು ಉತ್ತಮವಾಗಿ ಬಳಸಿಕೊಂಡು ಸಮಾಜವನ್ನು ಅಭಿವೃದ್ಧಿ ಮಾಡುವ ಕಡೆ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ.ಸಿ.ನಾಗಣ್ಣ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ರಚನೆ ಮಾಡಿರುವ ಸಾಹಿತ್ಯ ಒಂದು ಭಾಗವಾಗಿದೆ. ನಾವು ಮಾಡಿದ ಬೋಧನೆ ಫಲಕೊಡುತ್ತಿದೆ. ನಮ್ಮ ನೆಲದಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಸಂತಸ ತಂದಿದೆ. ಯಾವ ಹುದ್ದೆಯಲ್ಲೂ ಇಂತಹ ಸಾರ್ಥಕ ಭಾವ ಸಿಗುತ್ತಿರಲಿಲ್ಲ. ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕನ್ನಡದ ಜಾಣ್ಮೆಯ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ, ಅಭಿಮಾನ ಪಡಬೇಕು. ಹೆಚ್ಚು ಜನರು ಮಾತನಾಡುವ ಜತೆಗೆ ಪ್ರಾಚೀನವಾಗಿರುವ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಗಡಿನಾಡಿನ ಜನರು ಗಾಂಭೀರ್ಯ, ಗಣತೆ ಮತ್ತು ಸುಖ ಸಂತೋಷದಿಂದ ಬದುಕುವಂತಾಗಬೇಕು ಎಂದರು.

ಪ್ರೊ.ಸಿ.ನಾಗಣ್ಣ ವಿಜ್ಞಾನ ವಿದ್ಯಾರ್ಥಿಯಾಗಿ ಮತ್ತು ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದ್ದಾರೆ. ಸಿ.ನಾಗಣ್ಣ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಸರ್ಕಾರ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ.-ಪ್ರೊ.ಎಂ.ಆರ್.ಗಂಗಾಧರ್, ಕುಲಪತಿ, ವಿಶ್ವವಿದ್ಯಾಲಯ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net