

ಚಾಮರಾಜನಗರ: ಜಿಲ್ಲೆಯಾದ್ಯಂತ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪೋರ್ಟಲ್ನಲ್ಲಿ ಅರ್ಹ ಲಾನುಭವಿಗಳು ಹೆಸರು ನೊಂದಾಯಿಸಿಕೊಳ್ಳುವ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಯೋಜನೆಯ ರಾಜ್ಯ ಸಂಚಾಲಕ ಮಾಜಿ ಸಚಿವ ಎಸ್.ಎ.ರಾಮದಾಸ್ ಮನವಿ ಮಾಡಿದರು.
ಪ್ರಧಾನಿ ನರೇಂದ್ರಮೋದಿ ಅವರು ಸೆ.17 ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದರು. ರಾಜ್ಯದ 18ಜಿಲ್ಲೆಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಚಾ.ನಗರ ಸಹಿತ ಈಭಾಗದ ಉಳಿದ 13 ಜಿಲ್ಲೆಗಳಲ್ಲಿ ಸೋಮವಾರದಿಂದ ಚಾಲನೆ ನೀಡಲಾಗಿದ್ದು ಮರಗೆಲಸ, ಕಬ್ಬಿಣದ ಆಯುಧ , ದೋಣಿ, ಟೂಲ್ ಕಿಟ್,ಬೀಗದ ಕೆಲಸ, ಚಿನ್ನದ ಕೆಲಸ, ಮಡಕೆ, ಕಲ್ಲು, ಚಮ್ಮಾರಿಕೆ, ಮನೆಕಟ್ಟುವಿಕೆ , ಚಾಪೆ, ಆಟಿಕೆ ತಯಾರಿಕೆ, ಸಲೂನ್, ದರ್ಜಿ, ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರ ಸಹಿತ 18ರೀತಿಯ ವಿವಿಧ ಕಸಬುದಾರರು ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ವಿಕಾಸ್ ಭಾರತ್ ವಾಹನಗಳು ಜಿಲ್ಲೆಗೆ ಬಂದಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ವಾಹನಗಳಲ್ಲೇ ವಿಶ್ವಕರ್ಮ ಯೋಜನೆಗೆ ನೋಂದಣಿ ಮಾಡಲಾಗುತ್ತಿದೆ.18ವರ್ಷ ಮೇಲ್ಪಟ್ಟವರು ಆಧಾರ್, ಬ್ಯಾಂಕ್ ಪಾಸ್‌ಪುಸ್ತಕ, ರೇಷನ್ ಕಾರ್ಡ್‌ನೊಂದಿಗೆ ಬೆರಳಚ್ಚು ನೀಡಿ ಸ್ಥಳದಲ್ಲೇ ನೊಂದಣಿ ಮಾಡಿಸಿಕೊಳ್ಳಬಹುದು. ಇಲ್ಲವೇ ಹತ್ತಿರದ ಗ್ರಾಮಒನ್, ಕರ್ನಾಟಕ ಒನ್ ಅಥವಾ ಸಿಎಸ್‌ಸಿ ಕೇಂದ್ರಗಳಲ್ಲಾದರೂ ನೊಂದಣಿ ಮಾಡಿಸಬಹುದು. ಅರ್ಹ ಫಲಾನುಭವಿಗೆ 5ರಿಂದ 7ದಿನ ತರಬೇತಿ ನೀಡಲಾಗುತ್ತದೆ. ಆಸಕ್ತರಿಗೆ 15 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆಯಲ್ಲದೇ ಪ್ರತೀದಿನ 500ರೂ.ಪ್ರೋತ್ಸಾಹಧನ, ತರಬೇತಿ ಬಳಿಕ ಪ್ರಮಾಣ ಪತ್ರ,ಗುರುತಿನ ಚೀಟಿ ನೀಡಿ ಟೂಲ್ ಕಿಟ್ ಗೆ 15ಸಾವಿರಸಹಾಯ ಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಲಾನುಭವಿಗಳಿಗೆ ಯಾವುದೇ ಗ್ಯಾರಂಟಿ ಪಡೆಯದೇ 1ಲಕ್ಷರೂ.ಅಭಿವೃದ್ದಿ ಸಾಲ ಕೊಡಲಾಗುತ್ತದೆ. 18ತಿಂಗಳಲ್ಲಿ ಶೇ.5ರ ಬಡ್ಡಿಯೊಂದಿಗೆ ಸಾಲ ಮರುಪಾವತಿ ಮಾಡಿದರೆ ಕೇಂದ್ರ ಸರ್ಕಾರ ಶೇ.8ರಷ್ಟು ಬಡ್ಡಿದರವನ್ನು ಫಲಾನುಭವಿ ಖಾತೆಗೆ ಉಚಿತವಾಗಿ ಒದಗಿಸುತ್ತದೆ. ಇದೇ ರೀತಿ 2ನೇ ಆವೃತ್ತಿಯಲ್ಲಿ 2ಲಕ್ಷರೂ. ಸಾಲವನ್ನು ಬ್ಯಾಂಕ್ ಮೂಲಕ ನೀಡಲಾಗುತ್ತದೆ. ಯೋಜನೆಗೆ ಕುಟುಂಬದ ಒಬ್ಬರು ಮಾತ್ರ ಅರ್ಹರಾಗಿದ್ದು, ಮನೆಯಲ್ಲಿ ಯಾರೇ ಸರ್ಕಾರಿ ನೌಕರಿಯಲ್ಲಿದ್ದರೂ ಆ ಮನೆಯವರು ಅರ್ಹರಾಗುವುದಿಲ್ಲ. ಈ ಯೋಜನೆಯನ್ನು ದೇಶದಾದ್ಯಂತ ಕಾರ್ಯ ರೂಪಕ್ಕೆ ತರಲು 13ಸಾವಿರ ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಮೀಸಲಿರಿಸಿದ್ದಾರೆ ಎಂದರು.
ಈ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಇದ್ದು ಈ ಸಮಿತಿಯಲ್ಲಿ ನಾನ್ ಅಫೀಷಿಯಲ್ ಸದಸ್ಯರಾಗಿ ಬಿಜೆಪಿ ಮುಖಂಡರಾದ ನೂರೊಂದು ಶೆಟ್ಟಿ, ನಾರಾಯಣ ಪ್ರಸಾದ್, ಕೊಳ್ಳೇಗಾಲ ನಟರಾಜು ಅವರನ್ನು ನಿಯುಕ್ತಿ ಗೊಳಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ರಾಜ್ಯ ಓಬಿಸಿ ಕಾರ್ಯಕಾರಿಣಿಯ ನೂರೊಂದು ಶೆಟ್ಟಿ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ನಟರಾಜು, ಮಾಧ್ಯಮ ವಕ್ತಾರ ಮಂಜುನಾಥ್ ಹಾಜರಿದ್ದರು.