ಬಿಡಾಡಿ ದನಗಳಲ್ಲಿ ಚರ್ಮಗಂಟು ರೋಗ

12chn2
Published on

ಚಾಮರಾಜನಗರ: ನಗರದ ರಸ್ತೆಗಳಲ್ಲಿ ಓಡಾಡುವ ಸಾಕಷ್ಟು ದನಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ಖಾಯಿಲೆ ಉಲ್ಬಣಗೊಳ್ಳುವ ಮುನ್ನಾ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಜಿಲ್ಲೆಯಾದ್ಯಂತ ಒಟ್ಟು 2.59 ಲಕ್ಷ ಜಾನುವಾರುಗಳಿದ್ದು, ಈ ಪೈಕಿ ಜಿಲ್ಲಾ ಕೇಂದ್ರದಲ್ಲಿ ಒಟ್ಟು 73.000 ಜಾನುವಾರುಗಳು ಇದೆ. ಇದರಲ್ಲಿ ಸಾಕಷ್ಟು ಬಿಡಾಡಿ ದನಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಮೈಮೇಲೆ ಗಂಟುಗಳನ್ನು ಹೊಂದಿರುವ ಜಾನುವಾರುಗಳು ನಿತ್ರಾಣಗೊಂಡು ರಸ್ತೆಗಳಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ಮಲಗಿರುವ ದೃಶ್ಯಗಳು ಕಾಣಸಿಗುತ್ತಿದೆ. ಈ ಚರ್ಮಗಂಟು ಕಾಯಿಲೆ ಒಂದು ಜಾನುವಾರಿನಿಂದ ಮತ್ತೊಂದು ಜಾನುವಾರಿಗೆ ಬೇಗ ಹರಡುತ್ತದೆ. ಜ್ವರ ತಗುಲಿದ ಹಸುವಿನ ಮೈಮೇಲೆ 48 ಗಂಟೆಗಳ ಅವಧಿಯಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ, ನಂತರ ಅದು ಉಲ್ಬಣಿಸಿ ಜಾನುವಾರು ನೋವಿನಿಂದ ಬಳಲುತ್ತದೆ.

ಜಿಲ್ಲೆಯಲ್ಲಿ ಈಗಾಗಲೇ ಮನೆಯಲ್ಲಿ ಸಾಕಿರುವ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಆದರೆ ಬಿಡಾಡಿ ದನಗಳಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಅವುಗಳಿಗೆ ಲಸಿಕೆ ನೀಡುವುದಕ್ಕೂ ಕೂಡ ತುಂಬಾ ಕಷ್ಟವಾಗುತ್ತದೆ. ಅವುಗಳಿಗೆ ಲಸಿಕೆ ನೀಡದಿದ್ದರೆ ಇತರೆ ಜಾನುವಾರುಗಳಿಗೆ ಹರಡುವ ಸಾಧ್ಯತೆಯೂ ಹೆಚ್ಚಾಗಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರವನ್ನು ಪಡೆದುಕೊಂಡು ಲಸಿಕೆ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ.ಹನುಮೇಗೌಡ ವಿಜಯವಾಣಿಗೆ ಮಾಹಿತಿ ನೀಡಿದರು.

ಎಚ್ಚರಿಕೆ ಅಗತ್ಯ:
ನಗರದಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಜಾನುವಾರುಗಳು ರಸ್ತೆಗಳಲ್ಲಿ ಕಂಡು ಬರುತ್ತಿದ್ದು, ಈ ರೋಗ ಇನ್ನಿತರೆ ಜಾನುವಾರುಗಳಿಗೆ ಹರಡುವ ಮುನ್ನಾ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಡಿವಿಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆ, ಶ್ರೀಚಾಮರಾಜೇಶ್ವರ ದೇವಸ್ಥಾನದ ಹಾಸುಪಾಸು, ರಥದ ಬೀದಿ, ಮಾರಿಗುಡಿ ರಸ್ತೆ, ಶ್ರೀವೀರಭದ್ರೇಶ್ವರ ದೇವಸ್ಥಾನ, ಸಂತೇಮರಹಳ್ಳಿ ವೃತ್ತದ ಸಮೀಪದಲ್ಲಿರುವ ಖಾಲಿ ನಿವೇಶನ, ಪ್ರಮುಖ ಹೋಟೆಲ್‌ಗಳ ಸಮೀಪದಲ್ಲಿ ಹೆಚ್ಚಾಗಿ ಬಿಡಾಡಿ ದನಗಳು ಕಾಣಿಸಿಕೊಳ್ಳುತ್ತವೆ. ಈಗಾಗಲೇ ಹಲವು ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಿದ್ದು, ಸಣ್ಣಪುಟ್ಟ ದನಗಳು ನಿತ್ರಾಣಗೊಂಡು ರಸ್ತೆಗಳಲ್ಲಿ ಬಿದ್ದಿರುವುದು ಕಾಣಿಸುತ್ತದೆ. ಇಂತಹ ದನಗಳನ್ನು ನೋಡಿದರೆ ಸಾರ್ವಜನಿಕರು ಭಯಗೊಂಡು ಓಡಿಸಲು ಮುಂದಾಗುತ್ತಾರೆ. ಈ ರೋಗ ಮತ್ತಷ್ಟು ಜಾನುವಾರುಗಳಿಗೆ ತಗುಲಿ ರೋಗ ಹೆಚ್ಚಾಗುವಮುನ್ನಾ ಇಲಾಖೆಯ ಅಧಿಕಾರಿಗಳು ಜಾನುವಾರುಗಳಿಗೆ ಸಂಪೂರ್ಣವಾಗಿ ಲಸಿಕೆ ಹಾಕಿ ರೋಗ ಬರುವುದನ್ನು ತಡೆಗಟ್ಟಬೇಕಿದೆ.

ಬಿಡಾಡಿ ದನಗಳ ಆರೈಕೆ ಕಷ್ಟ:
ಚರ್ಮ ಗಂಟು ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಸಾಕಿದ ಜಾನುವಾರುಗಳು ರೋಗ ಬಾಧೆಯಿಂದ ಬಳಲುತ್ತಿದ್ದರೆ ಅದಕ್ಕೆ ತಕ್ಷಣವೇ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿ ಮುಂಜಾಗೃತ ಲಸಿಕೆಯಾಗಲಿ ಅಥವಾ ಚಿಕಿತ್ಸೆಯಾಗಲಿ ಕೊಡಿಸುತ್ತಾರೆ. ಆದರೆ ಬಿಡಾಡಿ ದನಗಳಿಗೆ ಯಾರು ಆರೈಕೆ ಮಾಡುವರು ಎಂಬ ಪ್ರಶ್ನೆ ಕಾಡುತ್ತಿದೆ. ಬಿಡಾಡಿ ದನಗಳು ಗುಂಪು ಗುಂಪಾಗಿಯೇ ಇರುವುದರಿಂದ ಒಂದು ಜಾನುವಾರು ರೋಗದಿಂದ ಬಳಲುತ್ತಿದ್ದರೆ, ಇನ್ನುಳಿದ ಜಾನುವಾರುಗಳಿಗೂ ತೀವ್ರವಾಗಿ ರೋಗ ಹರಡುತ್ತದೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಆರೈಕೆ ಮಾಡುವುದು ತುಂಬಾ ಕಷ್ಟವಿದೆ. ಈ ನಿಟ್ಟಿನಲ್ಲಿ ಬಿಡಾಡಿ ದನಗಳಿಗೆ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಲು ಹಾಗೂ ರೋಗದಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

2.32 ಲಕ್ಷ ಜಾನುವಾರುಗಳಿಗೆ ವ್ಯಾಕ್ಸಿನ್:
ಜಿಲ್ಲೆಯಲ್ಲಿರುವ ಒಟ್ಟು 2.59 ಲಕ್ಷ ಜಾನುವಾರುಗಳಲ್ಲಿ ಪ್ರಸ್ತುತ 2.32 ಲಕ್ಷ ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಗಟ್ಟುವ ಲಸಿಕೆಯನ್ನು ನೀಡಲಾಗಿದೆ. ಸುಮಾರು 27000 ಜಾನುವಾರುಗಳಿಗೆ ಲಸಿಕೆಯನ್ನು ನೀಡಬೇಕಿದೆ. ಇದರಲ್ಲಿ ಹೆಚ್ಚಿನದಾಗಿ ಬಿಡಾಡಿ ದನಗಳೇ ಆಗಿರುತ್ತದೆ. ಇದು ವರ್ಷಕ್ಕೊಮ್ಮೆ ನೀಡುವ ಲಸಿಕೆಯಾಗಿದ್ದು, ಜಿಲ್ಲೆಗೆ 60 ಸಾವಿರ ಲಸಿಕೆಯನ್ನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಯಾವ ಜಾನುವಾರುಗಳಿಗೆ ಲಸಿಕೆ ಮಾಡಲು ಸಾಧ್ಯವಾಗಿಲ್ಲ ಅದನ್ನು ಹುಡುಕಿ ಲಸಿಕೆ ನೀಡುವ ಪ್ರಯತ್ನ ಮಾಡಲಾಗುತ್ತದೆ. ಸಾಕಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿದ್ದರೂ ಕೂಡ ಗಂಟುಗಳು ಆಗೆಯೇ ಉಳಿದಿರುತ್ತದೆ. ಆಗಾಗಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಆದರೂ ಇಲಾಖೆಯಿಂದ ಸಂಪೂರ್ಣ ಲಸಿಕೆ ನೀಡಲು ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೋಗ ಕಾಣಿಸಿಕೊಂಡರೆ ಲಸಿಕೆ:
ಒಂದು ಬಾರಿ ಚರ್ಮಗಂಟು ರೋಗ ಜಾನುವಾರುಗಳಿಗೆ ಬಂದರೆ ಅದು ಗುಣಮುಖವಾಗಲು, ಅದರಲ್ಲೂ ಗಂಟುಗಳು ಕರಗಲು 15-20 ದಿನಗಳನ್ನು ತೆಗೆದುಕೊಳ್ಳುತ್ತದೆ. ಕೆಲವು ಜಾನುವಾರುಗಳಿಗೆ ಗಂಟುಗಳು ಆಗೆಯೇ ಇರುತ್ತದೆ. ಆದರೆ ಆರೋಗ್ಯ ಚೆನ್ನಾಗಿರುತ್ತದೆ. ಮೇವನ್ನು ಚೆನ್ನಾಗಿ ಸೇವನೆ ಮಾಡುತ್ತದೆ. ತುಂಬಾ ಸಮಸ್ಯೆಯಾದಾಗ ಮಾತ್ರ ನಿತ್ರಾಣಗೊಂಡು ಮಲಗಿ ಬಿಡುತ್ತವೆ. ಸಾಕಷ್ಟು ಜಾನುವಾರುಗಳಿಗೆ ಚರ್ಮರೋಗ ಕಂಡುಬರುತ್ತದೆ. ಆ ಸಂದರ್ಭದಲ್ಲಿ ಲಸಿಕೆ ನೀಡಲಾಗುತ್ತದೆ. ಸದ್ಯಕ್ಕೆ ಲಸಿಕೆ ದಾಸ್ತಾನು ಇಲ್ಲ. ಶೀಘ್ರದಲ್ಲೇ ಚರ್ಮಗಂಟು ರೋಗದ ಲಸಿಕೆ ಬರುತ್ತದೆ. ನಗರದಲ್ಲಿ ರೋಗ ತಗುಲಿರುವ ದನಗಳನ್ನು ಗುರುತಿಸಿ ಮತ್ತೊಮ್ಮೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಣ್ಣ ಮಾಹಿತಿ ನೀಡಿದರು.

ಬಿಡಾಡಿ ದನಗಳಿಗೆ ಚರ್ಮಗಂಟು ರೋಗ ಕಂಡುಬಂದಿದ್ದರೆ ಶೀಘ್ರದಲ್ಲೇ ಲಸಿಕೆ ಹಾಕಿಸಲು ಕ್ರಮವಹಿಸಲಾಗುವುದು. ಈಗಾಗಲೇ ಜಿಲ್ಲೆಗೆ 60 ಸಾವಿರ ಲಸಿಕೆಯನ್ನು ತರಿಸಲು ಕ್ರಮವಹಿಸಲಾಗಿದೆ.-ಡಾ.ಹನುಮೇಗೌಡ, ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net