

ಕೊಳ್ಳೇಗಾಲ: ಜಿಲ್ಲೆಯ ಪ್ರವಾಸಿ ತಾಣವಾದ ಹೊಗೆನಕಲ್ ಜಲಪಾತ ವೀಕ್ಷಣೆಯ ಪ್ರವಾಸಿ ತೆಪ್ಪದ ಶುಲ್ಕವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಹನೂರು ತಾಲೂಕಿನ ಗೋಪಿನಾಥಂ ಮಾರು ಕೊಟ್ಟಾಯ್ ಗ್ರಾಮದ ಹೊಗೇನಕಲ್ ಪಾಲ್ಸ್ ತೆಪ್ಪ ಓಡಿಸುವವರ ಸಂಘದ ವತಿಯಿಂದ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಸುರೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾಂಗ್ರೆಸ್ ಓಬಿಸಿ ವಿಭಾಗದ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಹೆಬ್ಬಸೂರು ನೇತೃತ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಸುರೇಂದ್ರ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತೆಪ್ಪ ಓಡಿಸುವವರು ಮಾತನಾಡಿ, ಹೊಗೆನಕಲ್ ಜಲಪಾತ ವೀಕ್ಷಣೆಗೆ ತೆಪ್ಪದಲ್ಲಿ ಪ್ರವಾಸಿಗರನ್ನು ದೋಣಿಯಲ್ಲಿ ಕರೆದುಕೊಂಡು ಹೋಗಿ ಬರಲು ಒಂದು ದೋಣಿಗೆ ನಿಗದಿಪಡಿಸಿರುವ 500 ಶುಲ್ಕದಿಂದ ನಮ್ಮ ಎಲ್ಲಾ ಸದಸ್ಯರಿಗೆ ಸರಾಸರಿ ಕೂಲಿ ದೊರೆಯುವುದಿಲ್ಲ. ದೋಣಿ ಒಂದಕ್ಕೆ 1500 ಶುಲ್ಕ ಹೆಚ್ಚು ಮಾಡುವಂತೆ ಈಗಾಗಲೇ ಒಂದು ವರ್ಷದ ಹಿಂದೆ ತಮಗೆ ಮನವಿ ಸಲ್ಲಿಸಲಾಗಿದ್ದು, ಯಾವುದೇ ಶುಲ್ಕ ಹೆಚ್ಚು ಮಾಡಿಲ್ಲ. ಆಗಾಗಿ ನಮಗೆ ಸರಾಸರಿ ಕೂಲಿ ದೊರೆಯದೆ ದೋಣಿ ನಡೆಸಲು ಸಾಧ್ಯವಾಗುತ್ತಿಲ್ಲ. ನಮಗೆ ತಮಿಳುನಾಡು ಸರ್ಕಾರದ ಮಾದರಿಯಲ್ಲಿ 1500 ಶುಲ್ಕ ಹೆಚ್ಚಳ ಮಾಡಬೇಕು ಇಲ್ಲದಿದ್ದರೆ ತೆಪ್ಪ ಓಡಿಸುವುದನ್ನು ಸ್ಥಗಿತಗೊಳಿಸುವುದಾಗಿ ಮನವಿಯಲ್ಲಿ ಎಚ್ಚರಿಸಿದರು.
ಶುಲ್ಕ ಹೆಚ್ಚಳಕ್ಕೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ:
ಮನವಿ ಸ್ವೀಕರಿಸಿದ ಕೊಳ್ಳೇಗಾಲದ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಸುರೇಂದ್ರ ಮಾತನಾಡಿ, ತಮ್ಮಗಳ ಪರಿಶ್ರಮ ನಮಗೆ ತಿಳಿದಿದೆ. ಪ್ರವಾಸಿಗಳ ಅನುಕೂಲಕ್ಕೆ ತಕ್ಕಂತೆ 800 ರೂ. ಶುಲ್ಕದಲ್ಲಿ ತೆಪ್ಪ ಓಡಿಸಿ ಎಂದಾಗ ಬೋಟ್‌ಮೆನ್ ಸಂಘದವರು 1500 ರೂ. ಶುಲ್ಕ ಹೆಚ್ಚು ಮಾಡುವ ತನಕ ಬೋಟ್ ಓಡಿಸುವುದಿಲ್ಲ ಎಂದು ಪಟ್ಟು ಹಿಡಿದಾಗ ಇಲಾಖೆಯ ಮೇಲಾಧಿಕಾರಿಗಳಿಗೆ 1500 ರೂ. ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲಿಂದ ಅನುಮೋದನೆ ಆಗುವ ತನಕ ಹಳೆದರದಲ್ಲಿ ತೆಪ್ಪ ಓಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಈ ಸಂದರ್ಭದಲ್ಲಿ ಬೋಟ್‌ಮೆನ್ ಸಂಘದ ಅಧ್ಯಕ್ಷ ರತ್ನವೇಲು, ಕೆ.ಪಳನಿಸ್ವಾಮಿ, ಪ್ರಶಾಂತ್, ತೆರುಮಾಲ್, ಧರ್ಮರಾಜು, ಮುತ್ತು, ಪಳನಿಸ್ವಾಮಿ ಇತರರು ಹಾಜರಿದ್ದರು.