

ಚಾಮರಾಜನಗರ: ಜಿಲ್ಲಾ ಕೇಂದ್ರದಿಂದ ಗುಂಡ್ಲುಪೇಟೆ ಪಟ್ಟಣಕ್ಕೆ ಹೋಗುವ ಹೆದ್ದಾರಿ ವಿಸ್ತರಣೆ ಕನಸಾಗಿಯೇ ಉಳಿದಿದ್ದು, ಕಿರಿದಾದ ರಸ್ತೆಯಲ್ಲಿ ಹೆಚ್ಚಾದ ವಾಹನ ಸಂಚಾರದಿಂದ ಅಪಘಾತಗಳು ಸಂಭವಿಸುತ್ತಿವೆ.
ಚಾ.ನಗರದಿಂದ ಗುಂಡ್ಲುಪೇಟೆ ವರೆಗಿನ ಸುಮಾರು 33 ಕಿ.ಮೀ ರಾಜ್ಯ ಹೆದ್ದಾರಿಯನ್ನು 2017 ರಲ್ಲಿ ಅಂದಿನ ಸಂಸದ ದಿ.ಆರ್.ಧ್ರುವನಾರಾಯಣ್ ಒತ್ತಡದಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. 2018 ರಲ್ಲಿ ರಸ್ತೆಯನ್ನು ವಿಸ್ತರಣೆ ಮಾಡುವ ಸಂಬಂಧ ಸುಮಾರು 156 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿತ್ತು.
ಆದರೆ ಅಂದಿನಿಂದ ಈ ವರೆಗೂ ಹೆದ್ದಾರಿಯನ್ನು ವಿಸ್ತರಿಸದೇ ವಾಹನ ಸವಾರರು ಹಾಗೂ ಸಾರ್ವಜನಿಕರು ಜೀವವನ್ನು ಕೈಯಲ್ಲಿಡಿದು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಚಾ.ನಗರ-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದೆ. ರಸ್ತೆ ತೀರ ಹದಗೆಟ್ಟಿದ್ದು, ಹಲವು ಕಡೆ ಬೃಹತ್ ಗಾತ್ರದ ಗುಂಡಿಗಳು ಬಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ ಪ್ರಾರಂಭವಾದಾಗಿನಿಂದಲೂ ಗುಂಡ್ಲುಪೇಟೆ ವೃತ್ತದಿಂದ ಸಿಮ್ಸ್ ಆಸ್ಪತ್ರೆ ತಿರುವಿನವರೆಗೆ ಸಂಚಾರಿಸುವುದೇ ಕಷ್ಟವಾಗಿದೆ. ಕಿರಿದಾದ ರಸ್ತೆಯಲ್ಲಿ ಸಾಕಷ್ಟು ಬಾರಿ ಟ್ರಾಫಿಕ್ ಸಮಸ್ಯೆ ಉಂಟಾಗಿ, ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಗಾಗ್ಗೆ ಹೆದ್ದಾರಿಗೆ ಕೇವಲ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆಯೇ ವಿನಃ ರಸ್ತೆ ವಿಸ್ತರಣೆಯ ಕುರಿತು ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ದೂರುತ್ತಾರೆ.
ಸಂಚಾರಕ್ಕೆ ತೊಂದರೆ:
ಚಾ.ನಗರ-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಹಲವು ಕಡೆಗಳಲ್ಲಿ ಗುಂಡಿ ಬಿದ್ದಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಜೀವವನ್ನು ಕೈಯಲ್ಲಿಡಿದು ಸಂಚಾರ ಮಾಡಬೇಕಿದೆ. ರಸ್ತೆಯ ತಿರುವುಗಳಲ್ಲೇ ಸಾಕಷ್ಟು ಗುಂಡಿಬಿದ್ದಿದ್ದು, ಮಳೆ ಬಂದರಂತೂ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಬಿಸಿಲಿನ ವೇಳೆಯಲ್ಲಿ ರಸ್ತೆ ಧೂಳುಮಯ ವಾಗಲಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೃಹತ್ ಗಾತ್ರ ಟಿಪ್ಪರ್‌ಗಳು ಸಂಚಾರ ಮಾಡುವುದರಿಂದ ಬಹುಬೇಗ ಡಾಂಬರು ಕಿತ್ತು ಬರುತ್ತಿದೆ. ಬೃಹತ್ ಲಾರಿ ಹಾಗೂ ಟ್ರ್ಯಾಕ್ಟರ್‌ಗಳು ತುಂಬಿಕೊಂಡು ಹೋಗುವ ಜೆಲ್ಲಿ, ಮರಳು ರಸ್ತೆಯಲ್ಲಿ ಬಿದ್ದು ಸಣ್ಣ-ಪುಟ್ಟ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತದೆ. ರಿಂಗ್‌ರೋಡ್‌ನಿಂದ ಉತ್ತುವಳ್ಳಿ ಗ್ರಾಮಕ್ಕೆ ಹೋಗುವವರೆಗೂ ರಸ್ತೆ ತಗ್ಗಿನಿಂದ ಕೂಡಿದ್ದು, ಇದರಿಂದಾಗಿಯೇ ಸಾಕಷ್ಟು ವಾಹನಗಳು ಅಪಘಾತಕ್ಕೀಡಾಗಿದೆ.
ಅಪಘಾತಗಳು ಹೆಚ್ಚಳ:
ನಗರದ ಗುಂಡ್ಲುಪೇಟೆ ವೃತ್ತದಿಂದ ಶಿವಪುರ ಗ್ರಾಮಕ್ಕೆ ತೆರಳುವ ವರೆಗೂ ರಸ್ತೆ ಕಿರಿದಾಗಿದ್ದು, ಇತ್ತೀಚೆಗೆ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಗುಂಡ್ಲುಪೇಟೆ ವೃತ್ತದಿಂದ ಸಿಮ್ಸ್ ಆಸ್ಪತ್ರೆಗೆ ತೆರಳುವ ವೃತ್ತದ ವರೆಗೂ ಬಹಳ ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸಬೇಕಿದೆ. ನಡುವೆ ಉತ್ತುವಳ್ಳಿ ಗ್ರಾಮ ಹಾಗೂ ಗಾರ್ಮೆಂಟ್ಸ್ ಬರುವುದರಿಂದ ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಹಾಗೂ ಇನ್ನಿತರೆ ವಾಹನಗಳ ಅಪಘಾತ ಹೆಚ್ಚಾಗುತ್ತಿದೆ. ಹಲವರು ಮೃತಪಟ್ಟಿರುವುದು ಕಂಡುಬಂದಿದೆ. ಗುಂಡ್ಲುಪೇಟೆ ವೃತ್ತದಿಂದ ರಿಂಗ್ ರಸ್ತೆಗೆ ಬರುವವರೆಗೂ ಟ್ರಾಫಿಕ್ ಸಮಸ್ಯೆ ಸರ್ವೇಸಾಮಾನ್ಯವಾಗಿದ್ದು ವಾಹನ ಸವಾರರು, ಪಾದಚಾರಿಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಕಾರಣಕ್ಕೆ ಆದಷ್ಟು ಬೇಗ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ, ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕರ ಒತ್ತಾಯಸಿದ್ದಾರೆ.
2018 ರಲ್ಲೇ ಡಿಪಿಆರ್ ತಯಾರಿ:
ಗುಂಡ್ಲುಪೇಟೆ-ಚಾಮರಾಜನಗರ ನಡುವಿನ ರಾಜ್ಯ ಹೆದ್ದಾರಿ 81ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲು 2018 ರಲ್ಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಯೋಜನೆ ಬಗ್ಗೆ ವಿವರವಾದ ಡಿಪಿಆರ್ ತಯಾರಾಗಿದೆ. ಯೋಜನೆಯ ವರದಿ ಪ್ರಕಾರ ಸುಮಾರು 32.8 ಕಿ.ಮೀ ಹೆದ್ದಾರಿಯನ್ನು ಅಭಿವೃದ್ಧಿ ಮಾಡಲಾಗುತ್ತದೆ. ರಸ್ತೆ ನಿರ್ಮಾಣಕ್ಕೆ 120 ಕೋಟಿ ರೂ., ಭೂ ಸ್ವಾಧೀನ ಎಲ್ಲಾ ಸೇರಿ ಒಟ್ಟು 156 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ 20 ಎಕರೆಯಷ್ಟು ಜಾಗವನ್ನು ಭೂ ಸ್ವಾಧೀನ ಮಾಡಿಕೊಳ್ಳಲು ಮತ್ತು 12 ಕಿರು ಸೇತುವೆ ನಿರ್ಮಾಣ, 1.5 ಕಿ.ಮೀ. ಬೈಪಾಸ್ ರಸ್ತೆಯನ್ನು ತೆರಕಣಾಂಬಿಯಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗುಂಡ್ಲುಪೇಟೆ ವೃತ್ತದಿಂದ 800 ಮೀಟರ್‌ವರೆಗೆ ನಾಲ್ಕು ಪಥಗಳ ರಸ್ತೆ ನಿರ್ಮಾಣ, ರಸ್ತೆ ಹಾದು ಹೋಗುವ ಗ್ರಾಮಗಳಲ್ಲಿ ಚರಂಡಿ, ಪಾದಚಾರಿ ಮಾರ್ಗ, ಬಸ್ ನಿಲ್ದಾಣ, ತಡೆ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಇಚ್ಛಾಶಕ್ತಿ ಕೊರತೆ:
ಚಾ.ನಗರ-ಗುಂಡ್ಲುಪೇಟೆ ಅಭಿವೃದ್ಧಿಯಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಈ ಹಿಂದೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ದಿ.ಎಚ್.ಎಸ್.ಮಹದೇವಪ್ರಸಾದ್ ಹಾಗೂ ಸಂಸದರಾಗಿದ್ದ ದಿ.ಆರ್.ಧ್ರುವನಾರಾಯಣ್ ಅವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸುತ್ತಿದ್ದರು. ಅವರ ಅಧಿಕಾರದ ಅವಧಿಯಲ್ಲೇ ರಾಜ್ಯ ಹೆದ್ದಾರಿಯಾಗಿದ್ದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಿ ಡಿಪಿಆರ್ ಕೂಡ ತಯಾರಿಸಲಾಗಿತ್ತು. ಚಾ.ನಗರ-ಗುಂಡ್ಲುಪೇಟೆ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಅವರ ಶ್ರಮ ಅಪಾರವಾಗಿದೆ. ಆದರೆ ಪ್ರಸ್ತುತ ಅಧಿಕಾರದಲ್ಲಿರುವ ರಾಜಕಾರಣಿಗಳು ಈ ಕುರಿತು ಇಚ್ಛಾಶಕ್ತಿಯನ್ನು, ಅಭಿವೃದ್ಧಿ ಪರವಾದ ಚಿಂತನೆಗಳನ್ನು ಹೊಂದಿಲ್ಲ ಎಂದು ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ.
ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ ಅಭಿವೃದ್ಧಿ ಮತ್ತು ವಿಸ್ತರಣೆಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ದೊರೆಯಬೇಕಿದೆ. ನಾವು ಕೂಡ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ.
ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ
ದಿ.ಎಚ್.ಎಸ್.ಮಹದೇವಪ್ರಸಾದ್ ಹಾಗೂ ದಿ.ಆರ್.ಧ್ರುವನಾರಾಯಣ್ ಅವರ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿತ್ತು. ಇಂದಿನ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಚಾ.ನಗರ-ಗುಂಡ್ಲುಪೇಟೆ ರಸ್ತೆ ಅಭಿವೃದ್ಧಿ ಕಂಡಿಲ್ಲ.
ರವಿಚಂದ್ರ ಪ್ರಸಾದ್, ನಿವಾಸಿ, ಚಾಮರಾಜನಗರ